ನವದೆಹಲಿ:ವಿಮಾನಗಳಿಗೆ ಬಾಂಬ್ ಬೆದರಿಕೆ ಸರಣಿ 15ನೇ ದಿನವೂ ಮುಂದುವರಿದಿದೆ. ಸೋಮವಾರ ದೇಶೀಯ ಮತ್ತು ಅಂತಾರಾಷ್ಟ್ರೀಯ 60ಕ್ಕೂ ಹೆಚ್ಚು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ 15 ದಿನಗಳಲ್ಲಿ ಭಾರತೀಯ ಏರ್ಲೈನ್ಸ್ನ 410ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ಹೆಚ್ಚಿನ ಬೆದರಿಕೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಲಾಗಿದೆ. ಇಂದು ಏರ್ ಇಂಡಿಯಾ ಮತ್ತು ಇಂಡಿಗೋದ ತಲಾ ಸುಮಾರು 21 ವಿಮಾನಗಳು, ವಿಸ್ತಾರಾದ ಸುಮಾರು 20 ವಿಮಾನಗಳು ಹುಸಿ ಬೆದರಿಕೆಗಳನ್ನು ಸ್ವೀಕರಿಸಿವೆ.
ಸಾಮಾಜಿಕ ಮಾಧ್ಯಮದ ಮೂಲಕ ಬಂದ ಭದ್ರತಾ ಬೆದರಿಕೆಗಳಿಗೆ ಏರ್ ಇಂಡಿಯಾ ವಕ್ತಾರರು ಪ್ರತಿಕ್ರಿಯಿಸಿದ್ದು, ಸಂಸ್ಥೆಯ ಹಲವಾರು ವಿಮಾನಗಳಿಗೆ ಬೆದರಿಕೆ ಬಂದಿದೆ. ಪ್ರೋಟೋಕಾಲ್‌ಗಳನ್ನು ಅನುಸರಿಸಿ, ಸಂಬಂಧಿತ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಲಾಗಿದೆ. ಕಂಟ್ರೋಲ್ ಆಫೀಸರ್ಸ್ಗಳ ಮಾರ್ಗದರ್ಶನದಂತೆ ಎಲ್ಲ ಭದ್ರತಾ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಿಮಾನಯಾನ ಕಾನೂನು ತಿದ್ದುಪಡಿ:ವಿಮಾನಗಳಿಗೆ ಬರುತ್ತಿರುವ ಸತತ ಬೆದರಿಕೆ ಕರೆಗಳಿಂದಾಗಿ ಪ್ರಯಾಣಿಕರಲ್ಲಿ ಭಾರೀ ಆತಂಕ ಉಂಟಾಗಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಲು ವಿಮಾನಯಾನ ಕಾನೂನುಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ತಿಳಿಸಿದೆ.