ಕರ್ನಾಟಕ

karnataka

ಪುರಿ ಜಗನ್ನಾಥ ದೇಗುಲದಲ್ಲಿ ಜಾತ್ರೆ ವೇಳೆ ಪಟಾಕಿ ಸ್ಫೋಟ; ಮೂರು ಸಾವು, 20ಕ್ಕೂ ಹೆಚ್ಚು ಭಕ್ತರಿಗೆ ಗಾಯ - Puri Firecracker Explosion

By ETV Bharat Karnataka Team

Published : May 30, 2024, 11:45 AM IST

Updated : May 30, 2024, 1:16 PM IST

ಒಡಿಶಾದ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲಿ ಪಟಾಕಿಗಳು ಸ್ಫೋಟಗೊಂಡು ಸಾವು-ನೋವು ಸಂಭವಿಸಿದೆ.

ಜಾತ್ರೆ ವೇಳೆ ಪಟಾಕಿ ಸ್ಫೋಟ
ಪುರಿಯಲ್ಲಿ ಜಾತ್ರೆ ವೇಳೆ ಪಟಾಕಿ ಸ್ಫೋಟ (ETV Bharat)

ಪುರಿಯಲ್ಲಿ ಜಾತ್ರೆ ವೇಳೆ ಪಟಾಕಿ ಸ್ಫೋಟ (ETV Bharat)

ಒಡಿಶಾ:ಜಗತ್ಪ್ರಸಿದ್ಧ ಪುರಿ ಶ್ರೀ ಜಗನ್ನಾಥ ದೇವಾಲಯದ ಜಾತ್ರೆಯ ಸಂದರ್ಭದಲ್ಲಿ ಪಟಾಕಿಗಳು ಸ್ಫೋಟಗೊಂಡು ಮೂವರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಬುಧವಾರ ನಡೆಯಿತು.

ಜಾತ್ರೋತ್ಸವದ ಹಿನ್ನೆಲೆಯಲ್ಲಿ ನರೇಂದ್ರ ಪುಷ್ಕರಿಣಿಯಯಲ್ಲಿ ನಡೆಯುವ ಜಲಕ್ರೀಡೆ ವೀಕ್ಷಿಸಲು ಅಪಾರ ಪ್ರಮಾಣದಲ್ಲಿ ಭಕ್ತರು ನೆರೆದಿದ್ದರು. ಇದರ ಪಕ್ಕದಲ್ಲಿದ್ದ ದೇವಿ ಘಾಟ್‌ನ ಹೊಂಡದ ಸಮೀಪ ಪಟಾಕಿ ಸಿಡಿಸಲು ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ಪಟಾಕಿ ರಾಶಿಯ ಮೇಲೆ ಯಾವುದೋ ಘನ ಸ್ವರೂಪದ ವಸ್ತು ಬಿದ್ದು ಚೆಲ್ಲಾಪಿಲ್ಲಿಯಾಗಿ ಭಕ್ತರ ಮೇಲೆ ಸಿಡಿದಿವೆ.

ಘಟನೆಯಲ್ಲಿ ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಈ ಸಂದರ್ಭದಲ್ಲಿ ಕೆಲವರು ಪ್ರಾಣ ಉಳಿಸಿಕೊಳ್ಳಲು ಕೊಳಕ್ಕೆ ಹಾರಿದ್ದು ಅವರನ್ನು ರಕ್ಷಿಸಲಾಗಿದೆ. ತಕ್ಷಣ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಬೆಂಕಿ ತಗುಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಘಟಕಗಳ ಕೊರತೆ ಇದ್ದು, ಗಾಯಳುಗಳ ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು ಎಂಬ ಮಾಹಿತಿ ದೊರೆತಿದೆ.

ಈ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿ, "6 ಜನರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಮಗುವಿನ ಕೈ ಸುಟ್ಟು ಹೋಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಅಗ್ನಿ ಸುರಕ್ಷತಾ ಕ್ರಮಗಳು ಇರಲಿಲ್ಲ" ಎಂದು ಹೇಳಿದರು.

ಸ್ಥಳೀಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ಕಟಕ್ ಮತ್ತು ಭುವನೇಶ್ವರದ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಲಾಗಿದೆ. 18ಕ್ಕೂ ಹೆಚ್ಚು ರೋಗಿಗಳನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಸಿಎಂ ನವೀನ್‌ ಪಟ್ನಾಯಕ್ ಸಂತಾಪ: ದುರ್ಘಟನೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್​ ಸಂತಾಪ ವ್ಯಕ್ತಪಡಿಸಿದ್ದಾರೆ. ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, 'ಪುರಿ ನರೇಂದ್ರ ಕೊಳದ ಬಳಿ ನಡೆದ ಘಟನೆಯಿಂದ ತೀವ್ರ ಬೇಸರವಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಚಿಕಿತ್ಸೆಯ ಮೇಲೆ ನಿಗಾ ವಹಿಸುವಂತೆ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಗಾಯಾಳುಗಳ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು. ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರ ಭಾರತದಲ್ಲಿ ರಣಬಿಸಿಲು: ದೆಹಲಿಯಲ್ಲಿ 52°C ದಾಖಲು, ಬಿಹಾರದ ಶಾಲೆಯಲ್ಲಿ ಝಳಕ್ಕೆ 100 ಮಕ್ಕಳು ನಿತ್ರಾಣ - heatwave

Last Updated : May 30, 2024, 1:16 PM IST

ABOUT THE AUTHOR

...view details