ನವದೆಹಲಿ:ಕನ್ವರ್ ಯಾತ್ರಾ ಮಾರ್ಗದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವಂತೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಹೊರಡಿಸಿದ ನಿರ್ದೇಶನಕ್ಕೆ ಜುಲೈ 22ರಂದು ನಿಡಿದ್ಧ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಸುಪ್ರೀಂಕೋರ್ಟ್ ವಿಸ್ತರಿಸಿದೆ. ಕನ್ವರ್ ಯಾತ್ರಾ ಮಾರ್ಗದಲ್ಲಿ ಅಂಗಡಿಗಳ ಹೊರಗೆ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಜುಲೈ 22ರ ಮಧ್ಯಂತರ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ಬಿಜೆಪಿ ಆಡಳಿತವಿರುವ ರಾಜ್ಯಗಳು, ಕನ್ವರ್ ಯಾತ್ರೆಯ ಮಾರ್ಗಗಳಲ್ಲಿರುವ ರೆಸ್ಟೋರೆಂಟ್ ಅಥವಾ ಕೆಫೆಗಳ ಮಾಲೀಕರು, ಸಿಬ್ಬಂದಿಯ ಹೆಸರುಗಳು ಮತ್ತು ಇತರ ವಿವರಗಳನ್ನು ಪ್ರದರ್ಶಿಸಲು ಸೂಚಿಸಿದ್ದವು. ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠ, ಹೆಸರು ಪ್ರದರ್ಶಿಸಲು ಯಾರನ್ನೂ ಒತ್ತಾಯಿಸಬಾರದು ಎಂದು ಹೇಳಿದೆ.
ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯದ ಅಂಗಡಿ ಮಾಲೀಕರ ಮೂಲ ಹಕ್ಕುಗಳ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಕನ್ವರ್ ಯಾತ್ರೆಯಲ್ಲಿ ಭಾಗವಹಿಸುವ ಲಕ್ಷಾಂತರ ಭಕ್ತರ ಮೂಲಭೂತ ಹಕ್ಕುಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಉತ್ತರ ಪ್ರದೇಶ ಸರ್ಕಾರದ ನಿರ್ದೇಶನವನ್ನು ಸಮರ್ಥಿಸಿಕೊಳ್ಳುವಾಗ, ತೀರ್ಥಯಾತ್ರೆ ಕೈಗೊಳ್ಳುವಾಗ ಕನ್ವಾರಿಯಾಗಳು ಮಾಂಸಾಹಾರಿ ಆಹಾರವನ್ನು ಸೇವಿಸುವುದಿಲ್ಲ. ಆದರೆ ಕೆಲವೊಮ್ಮೆ ಸಸ್ಯಾಹಾರಿ ಎಂದು ಹೇಳಿಕೊಳ್ಳುವ ಅಂಗಡಿಗಳು ಮಾಂಸಾಹಾರಿ ಆಹಾರವನ್ನು ನೀಡುತ್ತಿರುವುದು ಕಂಡುಬಂದಿದೆ ಎಂದು ವಕೀಲರು ಒತ್ತಿ ಹೇಳಿದರು.
"ಆದೇಶ ಸ್ಪಷ್ಟವಾಗಿದೆ, ಕನ್ವರ್ ಮಾರ್ಗದಲ್ಲಿ ಹೆಸರನ್ನು ಬಹಿರಂಗಪಡಿಸಲು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ರಾಯ್ ಹೇಳಿದರು. ಆದೇಶದಲ್ಲಿನ ಗೊಂದಲವನ್ನು ನಿವಾರಿಸುವಂತೆ ವಕೀಲರು ನ್ಯಾಯಪೀಠವನ್ನು ಕೋರಿದರು. ಯಾವುದೇ ಗೊಂದಲವಿಲ್ಲ ಮತ್ತು ಜುಲೈ 22 ರ ಆದೇಶದ ಬಗ್ಗೆ ನ್ಯಾಯಾಲಯವು ಯಾವುದೇ ಸ್ಪಷ್ಟೀಕರಣವನ್ನು ನೀಡುವುದಿಲ್ಲ ಎಂದು ನ್ಯಾಯಮೂರ್ತಿ ರಾಯ್ ಹೇಳಿದರು.