ಮುಂಬೈ:ಮರಾಠಿ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಮೆಟ್ರೋ ರೈಲು ಕೆಲಸದಲ್ಲಿ ನಿರತರಾಗಿದ್ದ ಇಬ್ಬರು ಕಾರ್ಮಿಕರಿಗೆ ಡಿಕ್ಕಿ ಹೊಡೆದ ಪರಿಣಾಮಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಕಂಡಿವಲಿ ಪ್ರದೇಶದಲ್ಲಿ ಶನಿವಾರ ಮುಂಜಾನೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಟಿ ಮತ್ತು ಅವರ ಕಾರು ಚಾಲಕ ಕೂಡ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಠಾರೆ ಶೂಟಿಂಗ್ ಮುಗಿಸಿ ಮನೆಗೆ ಮರಳುವಾಗ ಈ ದುರಂತ ಸಂಭವಿಸಿದೆ. ಈ ಕುರಿತು ಮಾಹಿತಿ ನೀಡಿರುವ ಸಮ್ತಾ ನಗರ್ ಪೊಲೀಸ್ ಠಾಣೆ ಅಧಿಕಾರಿಗಳು, ಮಧ್ಯರಾತ್ರಿ ಬಳಿಕ ಕಂಡಿವಲಿ ಪೂರ್ವದ ಪೊಯಿಸರ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಲು ಕೆಲಸದಲ್ಲಿ ನಿರತರಾಗಿದ್ದ ಇಬ್ಬರು ಕಾರ್ಮಿಕರಿಗೆ ಕೊಠಾರೆ ಅವರ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯೊಂಡಿದ್ದಾರೆ. ನಟಿ ಮತ್ತು ಚಾಲಕ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸರಿಯಾದ ಸಮಯದಲ್ಲಿ ಏರ್ಬ್ಯಾಗ್ ಕಾರ್ಯನಿರ್ವಹಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.