ಡೆಹ್ರಾಡೂನ್, ಉತ್ತರಾಖಂಡ: ಗಡಿ ಎಂಬುದು ಮಾನವನನ್ನು ಮಾತ್ರ ಕಟ್ಟಿ ಹಾಕುವ ರೇಖೆಯಾಗಿದೆ. ಆದರೆ, ಪ್ರಾಣಿಗಳಿಗೆ ಇದರ ಕಟ್ಟುಪಾಡು ಇಲ್ಲ ಬಿಡಿ. ಇದೇ ರೀತಿಯಲ್ಲಿ ಸ್ವಚ್ಛಂದವಾಗಿ ಉತ್ತರಾಖಂಡದ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಹುಲಿಯೊಂದು ನಾಲ್ಕು ರಾಜ್ಯದಲ್ಲಿ ಸಂಚಾರ ಮಾಡಿದೆ. ಈ ರೀತಿ ಎರಡು ನದಿ ದಾಟಿ, ನಾಲ್ಕು ರಾಜ್ಯಗಳಲ್ಲಿ ಸಂಚಾರ ಮಾಡಿದ ಹುಲಿ ಇದಾಗಿದೆ. ಆದಾಗ್ಯೂ ಈ ಹುಲಿರಾಯನ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಇದೇ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ಚುರುಕುಗೊಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಹುಟುಕಾಟ: ಉತ್ತರಾಖಂಡ್ನ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶ ಅರಣ್ಯದಿಂದ ಹೊರಟಿರುವ ಈ ಹುಲಿ ನೂರಾರು ಕಿ.ಮೀ ಸಾಗಿದ್ದು, ಇದರ ಪತ್ತೆಗೆ ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತಮ್ಮ ಆವಾಸಸ್ಥಾನದ ಹೊರತಾಗಿ ಎಲ್ಲೆಡೆ ಈ ಹುಲಿ ಮುಕ್ತವಾಗಿ ಸಂಚಾರ ಮಾಡುತ್ತಿರುವುದು ಕೂಡ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಇದೇ ಕಾರಣಕ್ಕೆ ಇದೀಗ ಅನೇಕ ರಾಜ್ಯಗಳಲ್ಲಿ ಈ ಹುಲಿರಾಯನನ್ನು ಪತ್ತೆ ಹಚ್ಚಲು ಇಲಾಖೆ ಮುಂದಾಗಿದೆ. ರಾಜ್ಯದ ಗಡಿದಾಟಿ ಪ್ರಯಾಣಿಸಿರುವ ಈ ಹುಲಿಯು ಇದೀಗ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ಈ ಹುಲಿ ಉತ್ತರಾಖಂಡ್ದಿಂದ ಕಾಶ್ಮೀರದವರೆಗೆ ಪ್ರಯಾಣ ಬೆಳೆಸಿದೆ ಎಂಬುದೇ ಎಲ್ಲರನ್ನೂ ಅಚ್ಚರಿಗೆ ದೂಡುವಂತೆ ಮಾಡಿದೆ.
ಗಂಗಾ ಮತ್ತು ಯಮನಾ ನದಿ ದಾಟಿದ ಹುಲಿ: ಕಳೆದ 24 ವರ್ಷದಲ್ಲಿ ಗಂಗಾ ಮತ್ತು ಯಮುನಾ ನದಿ ದಾಟಿ ಸಂಚಾರ ಮಾಡಿದ ಹುಲಿ ಇದಾಗಿದೆ. ಈ ಹುಲಿಯು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಗೌಹರಿ ಶ್ರೇಣಿಯಿಂದ ಗಂಗಾ ನದಿಯನ್ನು ದಾಟಿ ರಾಜಾಜಿಯ ಮೋತಿಚೂರ್ ಶ್ರೇಣಿಯನ್ನು ಪ್ರವೇಶಿಸಿದೆ. ಹಿಮಾಚಲದಲ್ಲಿದ್ದಾಗ, ಅದು ಪೊಂಟಾದಿಂದ ಯಮುನಾ ನದಿಯನ್ನು ದಾಟಿ ಹರಿಯಾಣಕ್ಕೆ ಪ್ರಯಾಣಿಸಿದೆ.