ನವದೆಹಲಿ:ಈಶಾನ್ಯ ಭಾರತದ ರಾಜ್ಯಗಳಲ್ಲಿ 2017 ರಿಂದ ಈವರೆಗೂ ಭಾರೀ ಮಳೆಯಿಂದಾಗಿ 592 ಭೂಕುಸಿತಗಳು ಉಂಟಾಗಿವೆ. ಇದರಲ್ಲಿ ಈ ವರ್ಷದ ಏಪ್ರಿಲ್ನಿಂದ ಜುಲೈ ಅಂದರೆ ನಾಲ್ಕು ತಿಂಗಳಲ್ಲಿ 196 ಭೂಕುಸಿತಗಳು ನಡೆದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ಹಂಚಿಕೊಂಡ ಕೇಂದ್ರ ಭೂ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್, ಈಶಾನ್ಯ ಭಾರತವು ಅತಿಹೆಚ್ಚು ಮಳೆ ಹಾನಿ ಪ್ರಕರಣಗಳನ್ನು ಕಂಡಿದೆ. ಈ ವರ್ಷ ಏಪ್ರಿಲ್ನಿಂದ ಜುಲೈವರೆಗೆ ಅತ್ಯಧಿಕ ಭೂಕುಸಿತಗಳನ್ನು ಕಂಡಿದೆ. ಇದು 2017 ರಿಂದ ದಾಖಲಾದ ಒಟ್ಟು ಭೂಕುಸಿತಗಳ ಪೈಕಿ ಮೂರನೇ ಒಂದು ಭಾಗದಷ್ಟಿವೆ ಎಂದು ಹೇಳಿದರು.
ಬಿಜೆಪಿ ಸಂಸದ ಕಾಮಾಖ್ಯ ಪ್ರಸಾದ್ ತಾಸಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಏಪ್ರಿಲ್ 2017 ಮತ್ತು ಜುಲೈ 2024 ರ ನಡುವೆ ಈಶಾನ್ಯದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 592 ಭೂಕುಸಿತಗಳನ್ನು ದಾಖಲಿಸಿದೆ. ಅಲ್ಲಿ ಉಂಟಾದ ಜೀವ ಹಾನಿ ಮತ್ತು ಮೂಲಸೌಕರ್ಯಗಳ ನಾಶವು ಹೆಚ್ಚಿದೆ. ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಭೂಕುಸಿತಕ್ಕೆ ಹವಾಮಾನ ಏರಿಳಿತ ಮತ್ತು ಮಾನವ ನಿರ್ಮಿತ ಸಮಸ್ಯೆಗಳು ಕಾರಣವಾಗಿವೆ ಎಂದು ಮಾಹಿತಿ ನೀಡಿದರು.