ಕೊಟ್ಟಾಯಂ (ಕೇರಳ):ಶಬರಿಮಲೆಯಲ್ಲಿ ಭಕ್ತರ ದಟ್ಟಣೆಯನ್ನು ತಗ್ಗಿಸಲು ಈ ಬಾರಿ ಅಲ್ಲಿನ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸ್ವಾಮಿಯ ದರ್ಶನಕ್ಕಾಗಿ ಸ್ಥಳದಲ್ಲೇ ಬುಕ್ಕಿಂಗ್ (ಸ್ಟಾಟ್ ಬುಕ್ಕಿಂಗ್) ರದ್ದು, ದಿನಕ್ಕೆ 80 ಸಾವಿರ ಜನರಿಗೆ ದರ್ಶನ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ವಿ.ಎನ್. ವಾಸವನ್, ಈ ವರ್ಷ ಶಬರಿಮಲೆ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕ್ಕಿಂಗ್ ಇರುವುದಿಲ್ಲ. ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮುಂಗಡವಾಗಿಯೇ ಬುಕ್ಕಿಂಗ್ ಮಾಡಿಕೊಳ್ಳಬೇಕು. ಕಾಯ್ದಿರಿಸದೆ ಬಂದ ಭಕ್ತರನ್ನು ತಪಾಸಣೆ ಮಾಡಲಾಗುವುದು. ಸ್ಪಾಟ್ ಬುಕ್ಕಿಂಗ್ನಿಂದಾಗಿ ಭಕ್ತರ ಸಂಖ್ಯೆಯು ನಿರೀಕ್ಷೆಗೂ ಮೀರಿ ಹೆಚ್ಚುತ್ತದೆ. ಇದರಿಂದ ದಟ್ಟಣೆ ಉಂಟಾಗಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಸ್ಪಾಟ್ ಬುಕ್ಕಿಂಗ್ ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ ಎಂದರು.
ಪಾರ್ಕಿಂಗ್ ವ್ಯವಸ್ಥೆ ಹೆಚ್ಚಳ:ಶಬರಿಮಲೆಗೆ ಬರುವ ಭಕ್ತರಿಗೆ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ಪಾರ್ಕಿಂಗ್ ನಿಗದಿ ಮಾಡಲಾಗಿದೆ. ದಿನಕ್ಕೆ ಗರಿಷ್ಠ 80 ಸಾವಿರ ಜನರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ನ್ಯಾಯಾಲಯದ ಆದೇಶದಂತೆ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಶಬರಿಮಲೆಯಲ್ಲಿ ವರದಿ ಮಾಡಲು ಅವಕಾಶ. ದೇವಸ್ವಂ ಮಂಡಳಿ ನೀಡುವ ವಿಶೇಷ ಪಾಸ್ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.