ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆಗೆ ಅಲ್ಪಸಂಖ್ಯಾತ ಸಮುದಾಯದ ಬೆಂಬಲದ ಕೊರತೆ ಕಾರಣ ಎಂದು ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಇದೇ ವೇಳೆ, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಘೋಷಣೆ ಅನಗತ್ಯ ಎಂದು ಪ್ರತಿಪಾದಿಸಿರುವ ಅವರು, 'ಹಮ್ ಉಂಕೆ ಸಾಥ್, ಜೋ ಹುಮಾರೇ ಸಾಥ್' (ನಮ್ಮೊಂದಿಗೆ ಇರುವವರ ಜೊತೆ ನಾವಿದ್ದೇವೆ) ಎಂದು ಮಾತ್ರ ಹೇಳಬೇಕಿದೆ ಎಂದಿದ್ದಾರೆ.
2014ರಲ್ಲಿ ಮೊದಲ ಬಾರಿಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಬಿಜೆಪಿ ಘೋಷಣೆ ನೀಡಿತ್ತು. ನಂತರ 2019ರಲ್ಲಿ ಇದನ್ನು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್' ಎಂದು ವಿಸ್ತರಿಸಿತ್ತು. ಆದರೆ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ರಾಜ್ಯದ ಮತದಾರರಲ್ಲಿ ಸುಮಾರು ಶೇ.30ರಷ್ಟು ಅಲ್ಪಸಂಖ್ಯಾತರಿದ್ದಾರೆ. ಪಕ್ಷದ ಹಿನ್ನಡೆಗೆ ಅಲ್ಪಸಂಖ್ಯಾತರನ್ನು ಬಿಜೆಪಿ ನಾಯಕ ಬಹಿರಂಗವಾಗಿಯೇ ದೂರಿದ್ದಾರೆ.
ಸುವೇಂದು ಅಧಿಕಾರಿ ಹೇಳಿದ್ದೇನು?: ಬುಧವಾರ ನಡೆದ ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸುವೇಂದು, 'ನಾನು ರಾಷ್ಟ್ರೀಯವಾದಿ ಮುಸ್ಲಿಮರಿಗಾಗಿಯೂ ಮಾತನಾಡಿದ್ದೇನೆ. ನಾವೆಲ್ಲರೂ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಹೇಳುತ್ತಿದ್ದೆವು. ಆದರೆ, ನಾನು ಇದನ್ನು ಇನ್ಮುಂದೆ ಹೇಳುವುದಿಲ್ಲ. ಏಕೆಂದರೆ, ಅದು 'ಹಮ್ ಉಂಕೆ ಸಾಥ್, ಜೋ ಹುಮಾರೇ ಸಾಥ್' ಆಗಿರಬೇಕು ಎಂದು ನಾನು ಭಾವಿಸುತ್ತೇನೆ. ಅಲ್ಲದೇ, ಅಲ್ಪಸಂಖ್ಯಾತ ಮೋರ್ಚಾವೂ ಅಗತ್ಯವಿಲ್ಲ'' ಎಂದು ಹೇಳಿದ್ದಾರೆ.