ನವದೆಹಲಿ: 2024ರ ನೀಟ್-ಯುಜಿ ಪರೀಕ್ಷೆ ಮತ್ತು ಫಲಿತಾಂಶದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಮತ್ತೊಂದೆಡೆ, ನೀಟ್ ಪರೀಕ್ಷೆ ಬಗ್ಗೆ ತನಿಖೆ ನಡೆಸಬೇಕೆಂಬ ಬೇಡಿಕೆ ಕುರಿತು ಬಿಜೆಪಿ ಸರ್ಕಾರದ ಧೋರಣೆ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಕಾಂಗ್ರೆಸ್ ದೂರಿದೆ.
2024ನೇ ಸಾಲಿನ ನೀಟ್-ಯುಜಿ ಪರೀಕ್ಷೆಯು ಮೇ 5ರಂದು ನಡೆದಿತ್ತು. ಜೂನ್ 4ರಂದು ಫಲಿತಾಂಶ ಪ್ರಕಟವಾಗಿದೆ. ಆದರೆ, ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಮತ್ತು ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಎಂಬಿಬಿಎಸ್ ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದಿನ ವಿಚಾರಣೆಯಲ್ಲಿ, 1,563 ವಿದ್ಯಾರ್ಥಿಗಳಿಗೆ ನೀಡಿದ್ದ ಕೃಪಾಂಕಗಳನ್ನು ರದ್ದುಪಡಿಸಲಾಗುವುದು ಹಾಗೂ ಈ ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸಲಾಗುವುದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಆಧಾರರಹಿತ ಆರೋಪ-ಶಿಕ್ಷಣ ಸಚಿವ:ಇದೇ ವಿಷಯವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ''ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಸಂಸ್ಥೆ)ಯಲ್ಲಿನ ಭ್ರಷ್ಟಾಚಾರದ ಆರೋಪಗಳು ಆಧಾರರಹಿತವಾಗಿವೆ. ಇದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆ'' ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಂದುವರೆದು, ''ಈ ವಿಷಯವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ನಾವು ಕೋರ್ಟ್ ನಿರ್ಧಾರಕ್ಕೆ ಬದ್ಧ. ಯಾವುದೇ ವಿದ್ಯಾರ್ಥಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಬೇಜವಾಬ್ದಾರಿ, ಸಂವೇದನಾರಹಿತ ಧೋರಣೆ-ಕಾಂಗ್ರೆಸ್: ಮತ್ತೊಂದೆಡೆ, ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಎಐಸಿಸಿ ಪ್ರಧಾನ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ, ''ನೀಟ್-ಯುಜಿ ಪರೀಕ್ಷಾ ಅಕ್ರಮವು ಸುಮಾರು 24 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಸಂಪೂರ್ಣ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ನಾವು ಒತ್ತಾಯಿಸುತ್ತೇವೆ'' ಎಂದರು.
''ನೀಟ್ ಪರೀಕ್ಷೆ ಅಕ್ರಮದ ತನಿಖೆ ಕುರಿತ ಬೇಡಿಕೆಯ ಬಗ್ಗೆ ಬಿಜೆಪಿ ಸರ್ಕಾರದ ಧೋರಣೆ ಬೇಜವಾಬ್ದಾರಿ ಮತ್ತು ಸಂವೇದನಾರಹಿತವಾಗಿದೆ. ವಿವಿಧ ಕೋಚಿಂಗ್ ಮತ್ತು ಪರೀಕ್ಷಾ ಕೇಂದ್ರಗಳು ನೀಡಿದ ಭರವಸೆಯಿಂದಾಗಿ ಸಾಮಾನ್ಯ ಕುಟುಂಬಗಳೂ ಸಹ ಸುಮಾರು 30 ಲಕ್ಷ ರೂ.ಗಳಷ್ಟು ಹಣ ಕಳೆದುಕೊಂಡಿವೆ. ಹೀಗಾಗಿ ಎನ್‌ಟಿಎ ನೇತೃತ್ವದ ಯಾವುದೇ ತನಿಖೆಯು ನ್ಯಾಯಸಮ್ಮತವಾಗುವುದಿಲ್ಲ. ಎನ್‌ಟಿಎ ಅಧ್ಯಕ್ಷರನ್ನು ತೆಗೆದುಹಾಕಬೇಕು. 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಲಹೆ ನೀಡಲು ಇಷ್ಟಪಡುವ ಪ್ರಧಾನಿ ನರೇಂದ್ರ ಮೋದಿ, ಈ ಪದವಿಪೂರ್ವ ವಿದ್ಯಾರ್ಥಿಗಳಿಗೆ ಉಂಟಾದ ಮಾನಸಿಕ ಆಘಾತ ಮರೆಯಬಾರದು'' ಎಂದು ಒತ್ತಾಯಿಸಿದರು.
ಚುನಾವಣಾ ಫಲಿತಾಂಶದ ದಿನವೇ ಪರೀಕ್ಷಾ ಫಲಿತಾಂಶ:''ನೀಟ್ ಹಗರಣದ ಬಗ್ಗೆ ಪ್ರಧಾನಿ ಗಮನ ಹರಿಸುವ ಬದಲು ಪ್ರಮಾಣ ವಚನ ಸ್ವೀಕಾರ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ವಿದೇಶ ಪ್ರವಾಸಕ್ಕೆ ತೆರಳುವುದರಲ್ಲಿ ನಿರತರಾಗಿದ್ದಾರೆ. ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ ಈ ಪರೀಕ್ಷಾ ಫಲಿತಾಂಶವನ್ನೂ ಏಕೆ ಘೋಷಿಸಲಾಯಿತು ಎಂಬುದೇ ನಿಗೂಢ. ಅಕ್ರಮದ ಕಾರಣಕ್ಕೆ ಇದು ಬಿರುಗಾಳಿ ಬೀಸುತ್ತಿದೆ ಎಂದು ಸರ್ಕಾರಕ್ಕೆ ತಿಳಿದಿತ್ತು. ಜೂನ್ 4ರಂದು ಇಡೀ ದೇಶವು ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡುತ್ತಿರುವಾಗ ಈ ನೀಟ್ ಫಲಿತಾಂಶ ವಿಷಯವನ್ನು ಮರೆಮಾಚಲು ಬಯಸಿದ್ದರು'' ಎಂದು ಗೊಗೊಯ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
''ನಾವು ಸಂಸತ್ತಿನ ಅಧಿವೇಶನಕ್ಕಾಗಿ ಕಾಯುತ್ತಿದ್ದೇವೆ. ಸಂಸತ್ತಿನೊಳಗೆ ದೇಶದ 24 ಲಕ್ಷ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುತ್ತೇವೆ'' ಎಂದು ಅವರು ಹೇಳಿದರು. ಇದೇ ವೇಳೆ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ನಿರಾಕರಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಕಿಡಿಕಾರಿದ ಗೊಗೊಯ್, ''ಪ್ರಧಾನಿಯವರೇ ಮೌನ ವಹಿಸುತ್ತಿರುವಾಗ ಇಂತಹ ಆರೋಪಗಳನ್ನು ಯಾವಾಗಲೂ ವಜಾಗೊಳಿಸುವುದು ಈ ಸರ್ಕಾರದ ಕಾರ್ಯ ವಿಧಾನವಾಗಿದೆ'' ಎಂದು ಟೀಕಿಸಿದರು.
ಇದನ್ನೂ ಓದಿ:NEET UG 2024 - ವಿದ್ಯಾರ್ಥಿಗಳ ಗ್ರೇಸ್ ಅಂಕ ರದ್ದುಗೊಳಿಸಿ, ಮರು ಪರೀಕ್ಷೆಗೆ ಅವಕಾಶ: ಸುಪ್ರೀಂ ಕೋರ್ಟ್ಗೆ ಕೇಂದ್ರದ ಉತ್ತರ