ವಾರಾಣಸಿ (ಉತ್ತರ ಪ್ರದೇಶ):ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಪ್ರತಿಷ್ಠಿತ ಜಿಯೋ ವರ್ಲ್ಟ್ ಕನ್ವೆನ್ಷನ್ ಸೆಂಟರ್ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಇದೀಗ ತನ್ನ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹಕ್ಕೂ ಮುನ್ನ, ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ, ನೀತಾ ಅಂಬಾನಿ ಸೋಮವಾರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮಗನ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಶಿವನಿಗೆ ಅರ್ಪಿಸಿ ಆಶೀರ್ವಾದ ಪಡೆದರು.
ಸುಂದರವಾದ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದ ನೀತಾ ಅಂಬಾನಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ದಶಾಶ್ವಮೇಧ ಘಾಟ್ನಲ್ಲಿ ನಡೆದ ವಿಶ್ವವಿಖ್ಯಾತ ಗಂಗಾ ಆರತಿಯಲ್ಲಿ ಪಾಲ್ಗೊಂಡರು. ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶಿ ವಿಶ್ವನಾಥನ ದರ್ಶನಕ್ಕೆ ಬಂದ ಉದ್ದೇಶದ ಬಗ್ಗೆ ಮಾತನಾಡಿದರು.
"ನಾನು ಶಿವನಿಗೆ ಪ್ರಾರ್ಥನೆ ಸಲ್ಲಿಸಿದ್ದು, ಶಿವನ ಆಶೀರ್ವಾದ ಸಿಕ್ಕಿರುವ ಆನಂದದಲ್ಲಿದ್ದೇನೆ. ಇಂದು ನಾನು ಅನಂತ್ ಹಾಗೂ ರಾಧಿಕಾ ಅವರ ಮದುವೆ ಆಮಂತ್ರಣ ಪತ್ರದ ಜೊತೆಗೆ ಇಲ್ಲಿಗೆ ಬಂದಿದ್ದೇನೆ. ಅದನ್ನು ಸರ್ವೇಶ್ವರನಿಗೆ ಅರ್ಪಿಸಿದ್ದೇನೆ. 10 ವರ್ಷಗಳ ಬಳಿಕ ನಾನು ಇಲ್ಲಿಗೆ ಬಂದಿದ್ದು, ನನಗೆ ತುಂಬಾ ಸಂತೋಷವಾಗಿದೆ. ನಾನು ಗಂಗಾ ಆರತಿ ಸಮಯದಲ್ಲಿ ಇಲ್ಲಿಗೆ ಬಂದಿರುವುದು ನನ್ನ ಅದೃಷ್ಟ, ಇಲ್ಲಿ ತುಂಬಾ ಶಕ್ತಿ ಇದೆ. ಮಗ ಮತ್ತು ಸೊಸೆಯೊಂದಿಗೆ ಮತ್ತೆ ವಾರಾಣಸಿಗೆ ಬರುತ್ತೇನೆ. ಮದುವೆಯ ನಂತರ ಗಂಗಾ ಮಾತೆಯ ಆರತಿಯಲ್ಲಿ ಪಾಲ್ಗೊಳ್ಳುತ್ತೇನೆ" ಎಂದು ನೀತಾ ಅಂಬಾನಿ ಹೇಳಿದರು.
"10 ವರ್ಷಗಳ ಹಿಂದೆ ನನ್ನ ಹುಟ್ಟುಹಬ್ಬದ ಸಂದರ್ಭ ವಾರಾಣಸಿಗೆ ಬಂದಿದ್ದೆ. ಇದೀಗ ಮತ್ತೆ ಭೇಟಿ ನೀಡಿ, ಮತ್ತೊಮ್ಮೆ ಗಂಗಾ ಆರತಿಯಲ್ಲಿ ಭಾಗವಹಿಸಿದ್ದೇನೆ. ಕಳೆದ 10 ವರ್ಷಗಳಲ್ಲಿ ಇಲ್ಲಿನ ರಸ್ತೆಗಳು, ಸ್ವಚ್ಛತೆ ಮತ್ತು ಮೂಲಸೌಕರ್ಯ ನೋಡಿದರೆ ಬನಾರಸ್ ಅಗಾಧವಾಗಿ ಅಭಿವೃದ್ಧಿಯಾಗಿದೆ. 10 ವರ್ಷಗಳಲ್ಲಿ ಯಾವುದೇ ನಗರ ಸಾಧಿಸಲು ಕಷ್ಟವಾದದ್ದನ್ನು ಬನಾರಸ್ ಸಾಧಿಸಿದೆ" ಎಂದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ನೀತಾ ಅಂಬಾನಿ ವಾರಾಣಸಿಯ ಪ್ರಸಿದ್ಧ ಕಾಶಿ ಚಾಟ್ ಅಂಗಡಿಗೆ ಭೇಟಿ ನೀಡಿ, ಸಾಮಾನ್ಯರಂತೆ, ಬನಾರಸಿ ಚಾಟ್, ಬನಾರಸಿ ಟೊಮೆಟೋ ಚಾಟ್, ಪಕೋಡಾ, ಗೋಲ್ಗಪ್ಪಾ ಸವಿದರು. ಅಂಗಡಿಯವನ ಜೊತೆಗೆ ನೀತಾ ಅಂಬಾನಿ ಸೀಕ್ರೆಟ್ ರೆಸಿಪಿಯ ಬಗ್ಗೆ ಕೇಳಿದಾಗ ಆತ ಮುಗುಳುನಕ್ಕು ಕೈ ಜೋಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಬನಾರಸಿ ನೇಕಾರರನ್ನು ಭೇಟಿಯಾಗಲಿರುವ ನೀತಾ ಅಂಬಾನಿ: ನೀತಾ ಅಂಬಾನಿ ಕಾಶಿ ವಿಶ್ವನಾಥನಿಗೆ ಆಮಂತ್ರಣ ಪತ್ರಿಕೆ ಸಲ್ಲಿಸುವುದರ ಜೊತೆಗೆ, ಬನಾರಸ್ ನೇಕಾರರನ್ನು ಭೇಟಿ ಮಾಡುವ ಉದ್ದೇಶದಿಂದ ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರೊಂದಿಗೆ ಕಾಶಿಗೆ ಬಂದಿದ್ದಾರೆ. ಬನಾರಸ್ನಲ್ಲಿ ಇತ್ತೇಚೆಗೆ ನಡೆದ ಫ್ಯಾಶನ್ ಶೋ ನಂತರ ಮನೀಶ್ ಮಲ್ಹೋತ್ರಾ ನೇಕಾರರನ್ನು ದತ್ತು ತೆಗೆದುಕೊಳ್ಳುವ ಕೆಲಸವನ್ನು ಮಾಡಿದ್ದರು. ಇದೇ ಕೆಲಸದ ನಿಮ್ಮಿತ್ತ ನೀತಾ ಅಂಬಾನಿ ಬನಾರಸ್ಗೆ ತಲುಪಿದ್ದಾರೆ. ವಾರಾಣಸಿಯ ಪೀಲಿ ಕೋತಿಯ ಕೆಲವು ನೇಕಾರರನ್ನು ಭೇಟಿ ಮಾಡುವುದಾಗಿ ಹೇಳಿರುವ ನೀತಾ ಅಂಬಾನಿ, ಬನಾರಸ್ ಸೀರೆ ಉದ್ಯಮವನ್ನು ಹೊಸ ಎತ್ತರಕಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದ್ದಾರೆ.