ನವದೆಹಲಿ:ನವದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 14 ಮಹಿಳೆಯರು ಸೇರಿ 18 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಸೂಕ್ತ ವ್ಯವಸ್ಥೆ ಮಾಡದೇ ಇರುವುದು ದುರಂತಕ್ಕೆ ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಆದರೆ, ನಿಜವಾಗಿಯೂ ಸ್ಥಳದಲ್ಲಿ ಏನಾಯಿತು ಎಂಬುದನ್ನು ಪ್ರತ್ಯಕ್ಷದರ್ಶಿಗಳು ತಾವು ಕಂಡಂತೆ ವಿವರಿಸಿದ್ದಾರೆ.
ಕ್ಷಣದಲ್ಲಿ ನಡೆದು ಹೋಯ್ತು ದುರಂತ:ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ಗೆ ಹೊರಡುವ ರೈಲುಗಳನ್ನು ಹತ್ತಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 14 ಮತ್ತು 15ರಲ್ಲಿ ಕಾಯುತ್ತಿದ್ದ ಜನಸಂದಣಿಯಲ್ಲಿ ನಡೆದ ಕಾಲ್ತುಳಿತವು ಕ್ಷಣ ಮಾತ್ರದಲ್ಲಿ, ಯಾವುದೇ ಎಚ್ಚರಿಕೆ ಇಲ್ಲದೇ ನಡೆದ ಘಟನೆಯಾಗಿದೆ. ನೋಡನೋಡುತ್ತಿದ್ದಂತೆ ಜನರು ನೂಕಾಟ, ತಳ್ಳಾಟ ನಡೆಸಿದ್ದರಿಂದ ದುರಂತ ಸಂಭವಿಸಿತು ಎಂದು ಸಾವನ್ನಪ್ಪಿದ ಮತ್ತು ಗಾಯಗೊಂಡವರ ಸಂಬಂಧಿಕರು ಹೇಳಿದರು.
ದುರ್ಘಟನೆಯ ಭಯಾನಕತೆಯನ್ನು ಬಿಚ್ಚಿಟ್ಟ ಶೀಲಾ ಎಂಬವರು, ಪತಿ ಮತ್ತು ಇತರರೊಂದಿಗೆ ಮಹಾ ಕುಂಭಕ್ಕೆ ತೆರಳಲು ನಿಲ್ದಾಣಕ್ಕೆ ಬಂದೆವು. ಪ್ಲಾರ್ಟ್ಫಾರ್ಮ್ ಕಡೆಗೆ ಬರುತ್ತಿದ್ದಾಗ ನೂಕಾಟ ಶುರುವಾಯಿತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಜನರು ಒಬ್ಬರ ಮೇಲೆ ಒಬ್ಬರ ಬಿದ್ದರು. ಇದರಲ್ಲಿ ನನ್ನ ಸೋದರಮಾವ ಉಸಿರುಗಟ್ಟಿ ಮೃತಪಟ್ಟರು. ಇನ್ನೊಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯು ಅರೆಕ್ಷಣದಲ್ಲಿ ನಡೆದು ಹೋಯಿತು ಎಂದರು.
ಬಿಹಾರದ ಸೋನ್‌ಪುರ ನಿವಾಸಿ ಪಪ್ಪು ಹೇಳುವಂತೆ, ರಾತ್ರಿ 9 ಗಂಟೆಗೆ ರೈಲು ಹತ್ತಬೇಕಿತ್ತು. ನಾವು ಸಂಜೆ 5 ಗಂಟೆಗೆ ನಿಲ್ದಾಣಕ್ಕೆ ಬಂದೆವು. ರಾತ್ರಿ 8.30ರಿಂದ 8.45ಕ್ಕೆ ನಿಲ್ದಾಣದಲ್ಲಿ ಭಾರೀ ಜನ ಸೇರಿದರು. ಜನರ ನೂಕುನುಗ್ಗಲು ಕಂಡು ಅಪಾಯಕಾರಿ ಎಂದು ಭಾವಿಸಿ, ಪ್ರಯಾಣ ರದ್ದುಗೊಳಿಸಲು ಯೋಚಿಸಿದೆವು. ಆದರೆ, ಜನರಿಂದ ಹೊರಬರಲು ಸಾಧ್ಯವಾಗಲಿಲ್ಲ. ನನ್ನ ಅತ್ತೆ ಜನರ ಕಾಲಡಿ ಸಿಕ್ಕು ಮೃತಪಟ್ಟರು ಎಂದು ಕಣ್ಣೀರು ಹಾಕಿದರು.
ಕೂಲಿಕಾರರು ಕಂಡಂತೆ..:ರೈಲ್ವೆ ನಿಲ್ದಾಣದಲ್ಲಿ ವಸ್ತುಗಳನ್ನು ಹೊರುವ ಕೂಲಿ ಕಾಲ್ತುಳಿತದ ಬಗ್ಗೆ ನಿಖರವಾದ ವಿವರಣೆ ನೀಡಿದರು. "ನಾನು ಇಲ್ಲಿ 1981 ರಿಂದ ಕೂಲಿಯಾಗಿ ಕೆಲಸ ಮಾಡುತ್ತಿದ್ದೇನೆ. ಇಷ್ಟೊಂದು ಪ್ರಮಾಣದ ಜನಸಂದಣಿ ಹಿಂದೆಂದೂ ನೋಡಿಲ್ಲ. ಪ್ರಯಾಗ್‌ರಾಜ್ ಸ್ಪೆಷಲ್ ರೈಲು ಪ್ಲಾಟ್‌ಫಾರ್ಮ್ ಸಂಖ್ಯೆ 12ರಿಂದ ಹೊರಡಬೇಕಿತ್ತು. ಆದರೆ ಅದನ್ನು 16ಕ್ಕೆ ಸ್ಥಳಾಂತರಿಸಲಾಯಿತು. ಪ್ಲಾಟ್‌ಫಾರ್ಮ್ 12ರಲ್ಲಿ ಕಾಯುತ್ತಿದ್ದ ಜನರು ಅಲ್ಲಿಂದ ಒಮ್ಮೆಲೆ 16ಕ್ಕೆ ಧಾವಿಸಿ ಬಂದರು. ಇದರಿಂದ ಬರುವ ಮತ್ತು ಹೋಗುವ ಜನರ ಮಧ್ಯೆ ತಿಕ್ಕಾಟ ಸಂಭವಿಸಿತು. ಈ ವೇಳೆ ಎಸ್ಕಲೇಟರ್ ಮತ್ತು ಮೆಟ್ಟಿಲುಗಳ ಮೇಲೆ ಜನರು ಬಿದ್ದರು. ನೂಕು ನುಗ್ಗಲು ತಡೆಯಲು ಹಲವಾರು ಕೂಲಿಗಳು ಯತ್ನಿಸಿದರು. ಆದರೆ, ಅಷ್ಟೊತ್ತಿಗಾಗಲೇ ಕಾಲ್ತುಳಿತ ಸಂಭವಿಸಿತು. 15 ಶವಗಳನ್ನು ನಾವೇ ಆಂಬ್ಯುಲೆನ್ಸ್‌ನಲ್ಲಿ ತುಂಬಿಸಿದೆವು ಎಂದರು.
ಪರಿಹಾರ ಘೋಷಣೆ:ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರಿಗೆ ರೈಲ್ವೆ ಇಲಾಖೆಯು ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತು. ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ., ಸಣ್ಣಪುಟ್ಟ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ರೈಲ್ವೆ ತಿಳಿಸಿದೆ.
ಇದನ್ನೂ ಓದಿ:ದೆಹಲಿ ರೈಲು ನಿಲ್ದಾಣದಲ್ಲಿ ಭೀಕರ ಕಾಲ್ತುಳಿತ: ಮಹಾ ಕುಂಭಮೇಳಕ್ಕೆ ಹೊರಟಿದ್ದ 18 ಮಂದಿ ಸಾವು