ನವದೆಹಲಿ: ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಿಂದ ಭಾರತೀಯ ಸೇನಾ ಸಿಬ್ಬಂದಿಯನ್ನು ಬದಲಾಯಿಸುವ ಪ್ರಕ್ರಿಯೆ ಕುರಿತಂತೆ ಎರಡು ರಾಷ್ಟ್ರಗಳ ನಡುವೆ ಭಾನುವಾರ ಪರಿಶೀಲನಾ ಸಭೆ ಜರುಗಿತು. ಈಗಾಗಲೇ ಭಾರತವು ಮೊದಲ ಹಂತದಲ್ಲಿ ಸೇನೆಯ ಒಂದು ತಂಡವನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇಂದು ಭಾರತ ಮತ್ತು ಮಾಲ್ಡೀವ್ಸ್ ದೇಶಗಳು ಮಾತುಕತೆ ನಡೆಸಿದ್ದು, ಎರಡನೇ ತಂಡವು ಏಪ್ರಿಲ್ 10ರೊಳಗೆ ಅಲ್ಲಿಂದ ಹಿಂದಿರುಗುವ ಸಾಧ್ಯತೆ ಇದೆ.
ಮಾಲ್ಡೀವ್ಸ್‌ನಿಂದ ಭಾರತೀಯ ಸೇನಾ ಪಡೆಗಳನ್ನು ವಾಪಸ್ ತೆಗೆದುಕೊಳ್ಳಲು ಅಲ್ಲಿನ ಸರ್ಕಾರ ಸೂಚಿಸಿದೆ. ಇದು ಎರಡು ರಾಷ್ಟ್ರಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ನಡುವೆ ಹಿಂದೂ ಮಹಾಸಾಗರದ ದ್ವೀಪಸಮೂಹದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ಅನ್ನು ನಿರ್ವಹಿಸುತ್ತಿದ್ದ ಸೇನಾ ಸಿಬ್ಬಂದಿಯ ಮೊದಲ ತಂಡವನ್ನು ಭಾರತ ಕೆಲ ದಿನಗಳ ಹಿಂದೆ ಹಿಂಪಡೆದುಕೊಂಡಿದೆ. ಈಗ ಮಾಲ್ಡೀವ್ಸ್‌ನ ಮಾಲೆಯಲ್ಲಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಉನ್ನತ ಮಟ್ಟದ ಕೋರ್ ಗುಂಪಿನ ಮೂರನೇ ಸಭೆ ನಡೆಸಲಾಗಿದೆ.
ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿ ಮೂರು ವಾಯುಯಾನ ನೆಲೆಗಳನ್ನು ನಿರ್ವಹಿಸುತ್ತಿದ್ದಾರೆ. ಬಿಕ್ಕಟ್ಟಿನ ಕಾರಣ ಸೇನಾ ಪಡೆಯನ್ನು ಹಿಂಪಡೆದುಕೊಂಡು, ಅಲ್ಲಿ ನಾಗರಿಕ ತಾಂತ್ರಿಕ ತಜ್ಞರನ್ನು ನಿಯೋಜಿಸಲು ಮುಂದಾಗಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ತಮ್ಮ ದೇಶದಿಂದ ಭಾರತೀಯ ಸೇನಾ ಸಿಬ್ಬಂದಿಯ ಮೊದಲ ತಂಡವನ್ನು ಹಿಂತೆಗೆದುಕೊಳ್ಳಲು ಮಾರ್ಚ್ 10ರ ಗಡುವು ನಿಗದಿಪಡಿಸಿದ್ದರು.