ಲಾತೂರ್ (ಮಹಾರಾಷ್ಟ್ರ):ವೈದ್ಯಕೀಯ ಪ್ರವೇಶ ಪರೀಕ್ಷೆ (NEET) ಪತ್ರಿಕೆ ಸೋರಿಕೆ ಪ್ರಕರಣ ಇದೀಗ ಮಹಾರಾಷ್ಟ್ರದ ಲಾತೂರ್ನಲ್ಲೂ ಸದ್ದು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ನಾಂದೇಡ್ನ ಎಟಿಎಸ್ ತಂಡವು ಶನಿವಾರ ಬಂಧಿಸಿದೆ. ಸಂಜಯ್ ತುಕಾರಾಮ್ ಜಾಧವ್ ಮತ್ತು ಜಾಲೀಲ್ ಉಮಾರ್ ಖಾನ್ ಪಠಾಣ್ ಅವರನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ ಆರೋಪದ ಮೇಲೆ ಬಂಧಿಸಲಾಗಿದ್ದು, ಭಾನುವಾರ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿತು. ಆದರೆ, ಭಾನುವಾರ ಸಂಜೆ ಜಿಲ್ಲಾ ಪರಿಷದ್ ಶಾಲೆಯ ಶಿಕ್ಷಕರಾಗಿದ್ದ ಸಂಜಯ್ ತುಕಾರಂ ಜಾಧವ್ ಮತ್ತು ಜಾಲೀಲ್ ಉಮಾರ್ ಖಾನ್ ಬಂಧಿಸಲಾಗಿದೆ. ಸದ್ಯ ಪ್ರಕರಣದಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಲಾತೂರ್ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೆಹಲಿಯ ಈರಣ್ಣ ಮಷ್ಣಜಿ ಕೊಂಗಾಲ್ವಾರ್ ಮತ್ತು ಗಂಗಾಧರ್ (ಪೂರ್ಣ ಹೆಸರು ಮರೆ ಮಾಚಲಾಗಿದೆ) ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 3(ವಿ), ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ 4 ಮತ್ತು 10, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 120 (ಬಿ) ಮೇಲೆ ಪ್ರಕರಣ ದಾಖಲಿಸಲಾಗಿದೆ.
ಜೊತೆಗೆ ಲಾತೂರ್ ಸಿಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಭಗವತ್ ಫಂಡೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ನಾಂದೇಡ್ನ ಎಟಿಎಸ್ ತಂಡವೂ ಶನಿವಾರ ಲಾತೂರ್ನಲ್ಲಿ ನೀಟ್ ಪರೀಕ್ಷೆ ಅಕ್ರಮದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಸಿತು. ಈ ಇಬ್ಬರು ಶಿಕ್ಷಕರು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿದೆ.