ಚೆನ್ನೈ, ತಮಿಳುನಾಡು:ನೀಟ್ ನಕಲಿ ಅಂಕಪಟ್ಟಿಯೊಂದಿಗೆ ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಮುಂದಾಗಿದ್ದ ವಿದ್ಯಾರ್ಥಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಚೆನ್ನೈನ ಮೆದವಕ್ಕಂನ ಲಕ್ಸೈ ಈ ವಂಚನೆ ಎಸಗಲು ಮುಂದಾದ ವಿದ್ಯಾರ್ಥಿ. ಈತ ನೀಟ್ ಪರೀಕ್ಷೆಯಲ್ಲಿ ಕೇವಲ 129 ಅಂಕ ಪಡೆದಿದ್ದರೂ ತಾನೂ 698 ಅಂಕ ಪಡೆದಿದ್ದೇನೆ ಎಂಬ ನಕಲಿ ಅಂಕಪಟ್ಟಿಯನ್ನು ಕಾಲೇಜು ಆಡಳಿತ ಮಂಡಳಿ ಮುಂದಿರಿಸಿದ್ದಾನೆ.
ಸೆಪ್ಟೆಂಬರ್ 29ರಂದು ಪೋಷಕರೊಂದಿಗೆ ಕಾಲೇಜಿಗೆ ಬಂದ ಲಕ್ಸೈ ಶಾಲಾ ಅಡಳಿತ ಮಂಡಳಿ ಮುಂದೆ ನಕಲಿ ಅಂಕಪಟ್ಟಿ ದಾಖಲೆ ನೀಡಿದ್ದಾನೆ. ಈತನ ಅಂಕಗಳನ್ನು ಕಂಡು ಅನುಮಾನಗೊಂಡ ಕಾಲೇಜು ಸಿಬ್ಬಂದಿ ಕಿಲ್ಪಾಕ್ನಲ್ಲಿರುವ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಕಚೇರಿಗೆ ಈ ಕುರಿತು ವಿವರಣೆ ಕೋರಿದ್ದಾರೆ. ಬಳಿಕ ವೈದ್ಯಕೀಯ ಶಿಕ್ಷಣ ಉಪ ನಿರ್ದೇಶಕರು ಇದು ನಕಲಿ ದಾಖಲಾತಿ ಎಂದಿದ್ದಾರೆ.
ಅಧಿಕಾರಿಗಳಿಗೆ ತನ್ನ ಅಂಕಪಟ್ಟಿಯ ಬಗ್ಗೆ ಅನುಮಾನವಿದೆ ಎಂಬ ಸುಳಿವಿಲ್ಲದ ಲಕ್ಸೈ ಕಿಲ್ಪಾಕ್ ವೈದ್ಯಕೀಯ ಕಾಲೇಜು ಅಧಿಕಾರಿ ಬಳಿ ಹೋಗಿದ್ದಾರೆ. ಈ ವೇಳೆ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತನ ನೀಟ್ ಅಂಕಪಟ್ಟಿ ಮತ್ತು ದಾಖಲಾತಿ ಪ್ರಮಾಣಪತ್ರ ಎರಡು ನಕಲಿ ಎಂಬುದು ಸಾಬೀತಾಗಿದೆ. ಈ ಬೆನ್ನಲ್ಲೇ ಕಿಲ್ಫಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.