ಉಡುಪಿ: ದೀಪಾವಳಿ ಎಂದರೆ ಹೆಸರೇ ಹೇಳುವಂತೆ ಬೆಳಕಿನ ಹಬ್ಬ, ದೀಪಗಳ ಹಬ್ಬ. ಉಳಿದೆಲ್ಲಾ ಹಬ್ಬಗಳ ಆಚರಣೆಗಳು ಒಂದೆರಡು ದಿನಗಳ ಮಟ್ಟಿಗೆ ಸೀಮಿತವಾಗಿದ್ದರೆ, ದೀಪಾವಳಿ ಹಬ್ಬ ಐದು ದಿನಗಳು ನಡೆಯುವ ಸಂಭ್ರಮದ ಹಬ್ಬ. ಅದರಂತೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಜಲಪೂರಣ ಹಾಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.
ಜಲಪೂರಣ ಶಾಸ್ತ್ರದ ಅಂಗವಾಗಿ ಮಠದ ಪುರೋಹಿತ ರಾಘವೇಂದ್ರ ಕೊಂಡಂಚ ಕಲಶಪೂಜೆ ಮಾಡಿದರು. ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಜಲಪೂರಣ ಮಾಡಲಾಯಿತು. ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಉಭಯ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ಮಾಡಿದರು. ನೆರೆದಿದ್ದ ಭಕ್ತರಿಗೂ ಎಣ್ಣೆಶಾಸ್ತ್ರವನ್ನು ಮಾಡಲಾಯಿತು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಪಾದರು ಜಗತ್ತಿನ ಎಲ್ಲ ಭಕ್ತರಿಗೂ ಒಳ್ಳೆಯದಾಗಬೇಕು, ಶಾಂತಿ ಸಿಗಬೇಕು. ಭಗವಂತನ ಅನುಗ್ರಹವಿದ್ದರೆ ಜನರಿಗೆ ಶಾಂತಿ ಸಿಗುತ್ತದೆ ಎಂದು ಶುಭಾಶೀರ್ವಾದ ಮಾಡಿದರು. ಮತ್ತು ದೀಪಾವಳಿ ಹಬ್ಬದ ಮಹತ್ವವನ್ನು ನಾಡಿನ ಸಮಸ್ತ ಜನತೆಗೆ ತಿಳಿಸಿದರು.
ಇದನ್ನೂ ಓದಿ: ದೀಪಾವಳಿ ಸಂಭ್ರಮ; ಮಂಗಳೂರಿನಲ್ಲಿ ಗಮನಸೆಳೆದ ಗೂಡುದೀಪ, ಬಗೆಬಗೆಯ ಆಕಾಶ ಬುಟ್ಟಿ