ಲಾತೂರ್ (ಮಹಾರಾಷ್ಟ್ರ): ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಜಲೀಲ್ ಪಠಾಣ್ ಎಂಬಾತ ಒಂದು ಕೋಟಿಗೂ ಅಧಿಕ ಬೆಲೆಬಾಳುವ ಬಂಗಲೆ ಹೊಂದಿರುವುದಾಗಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕನಾಗಿರುವ ಜಲೀಲ್ನನ್ನು ನೀಟ್ ಹಗರಣ ಪ್ರಕರಣದಲ್ಲಿ ಲಾತೂರ್ನಲ್ಲಿ ಬಂಧಿಸಲಾಗಿದೆ. ಪೊಲೀಸ್ ವಿಚಾರಣೆ ವೇಳೆ ಲಾತೂರಿನ ಉದ್ಗೀರ್ ಪಟ್ಟಣದ ಜಲ್ಕೋಟ್ ಎಂಬ ಪ್ರದೇಶದಲ್ಲಿ ಬರೋಬ್ಬರಿ 1 ಕೋಟಿಗೂ ಅಧಿಕ ಬೆಲೆಬಾಳುವ ಬಂಗಲೆ ನಿರ್ಮಿಸಿರುವುದಾಗಿ ಬೆಳಕಿಗೆ ಬಂದಿದೆ. ಜಲೀಲ್ ಪಠಾಣ್ ಹೌಸ್ ಎಂಬ ಮೂರು ಅಂತಸ್ತಿನ ಕಟ್ಟಡವನ್ನು ಹೊಂದಿದ್ದಾನೆ. ಜತೆಗೆ ಸರ್ಕಾರಿ ಹುದ್ದೆಗಾಗಿ ನಕಲಿ ಅಂಗವಿಕಲತೆ ಪ್ರಮಾಣ ಪತ್ರ ತಯಾರಿಸಿರುವುದನ್ನೂ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಲಾತೂರ್‌ನ ಕಾಟ್‌ಪುರ ಜಿಲ್ಲಾ ಪರಿಷತ್ ಶಾಲೆಯ ಮುಖ್ಯ ಶಿಕ್ಷಕನಾಗಿರುವ ಜಲೀಲ್ ಪಠಾಣ್ 2009ರಲ್ಲಿ ಸರ್ಕಾರಿ ಶಿಕ್ಷಕರಾಗಿ ನೇಮಕಗೊಂಡಿದ್ದ. ನಂತರ ಲಾತೂರ್ ಜಿಲ್ಲೆಗೆ ವರ್ಗಾವಣೆಗೊಂಡು ಮುಖ್ಯೋಪಾಧ್ಯಾಯರಾಗಿ ಬಡ್ತಿ ಪಡೆದಿದ್ದ. ಇದೀಗ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಜಲೀಲ್ನನ್ನು ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಮಾಡಲಾಗಿದೆ.