ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ದಶಕದ ನಂತರ ನಡೆಯುತ್ತಿರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅರ್ಧದಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ ಮೌಲ್ಯ 3.65 ಕೋಟಿ ರೂಪಾಯಿ ಇದೆ. ಇವರಲ್ಲಿ ಶೇಕಡಾ 13 ರಷ್ಟು ಮಂದಿ ಮೇಲೆ ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪಗಳಿವೆ ಎಂಬ ಅಂಶ ಬೆಳಕಿಗೆ ಬಂದಿದೆ.
ಅಸೋಸಿಯೇಷನ್‌ನ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ಅಧ್ಯಯನದಲ್ಲಿ ಈ ಅಂಶ ಬಹಿರಂಗವಾಗಿದೆ. ಚುನಾವಣಾ ಕಣದಲ್ಲಿರುವ ಮೂವರು ಅಭ್ಯರ್ಥಿಗಳು 100 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಅತಿ ಶ್ರೀಮಂತ ಮತ್ತು ಬಡ ಅಭ್ಯರ್ಥಿಗಳು:ಶ್ರೀನಗರದ ಚನ್ನಪೋರಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ ಅಭ್ಯರ್ಥಿ ಸೈಯದ್ ಮೊಹಮ್ಮದ್ ಅಲ್ತಾಫ್ ಬುಖಾರಿ ಅವರು 165 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಚುನಾವಣಾ ಕಣದಲ್ಲಿಯೇ ಇವರು ಅತಿ ಶ್ರೀಮಂತರಾಗಿದ್ದಾರೆ. ನಂತರ ಕಾಂಗ್ರೆಸ್ ನಾಯಕ ತಾರಿಕ್ ಹಮೀದ್ ಕರ್ರಾ ಅವರು 148 ಕೋಟಿ ರೂಪಾಯಿ, ಜಮ್ಮುವಿನ ನಗ್ರೋಟಾದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ಸಹೋದರರೂ ಆಗಿರುವ ದೇವೇಂದರ್ ಸಿಂಗ್ ರಾಣಾ 126 ಕೋಟಿ ಆಸ್ತಿಯ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ, ರಾಜೌರಿಯ ನೌಶೇರಾದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ರವೀಂದರ್ ರೈನಾ ಅವರು ಕೇವಲ 1,000 ರೂಪಾಯಿ ಆಸ್ತಿ ಹೊಂದಿದ್ದರೆ, ಪೂಂಚ್ನ ಸುರನ್‌ಕೋಟೆ ಅಭ್ಯರ್ಥಿ ಮೊಹಮ್ಮದ್ ಅಕ್ರಮ್ ಶೂನ್ಯ ಆಸ್ತಿ ಘೋಷಿಸಿದ್ದು, ಇಬ್ಬರೂ ಬಡ ಅಭ್ಯರ್ಥಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಮೂರು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಸ್ಪರ್ಧಿಸಿರುವ 873 ಅಭ್ಯರ್ಥಿಗಳ ಪೈಕಿ 872 ಅಭ್ಯರ್ಥಿಗಳ ನಾಮಪತ್ರವನ್ನು ಎಡಿಆರ್ ಅಧ್ಯಯನಕ್ಕೆ ಒಳಪಡಿಸಿದೆ.