ಚಂಡೀಗಢ:ಹರಿಯಾಣದಲ್ಲಿ ರಾಜಕೀಯ ವಿಪ್ಲವ ಉಂಟಾಗಿದೆ. ಸಿಎಂ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆಯ ಬಳಿಕ ರಾಜ್ಯದ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಅವರನ್ನು ಬಿಜೆಪಿ ಶಾಸಕಾಂಗ ಸಭೆ ಆಯ್ಕೆ ಮಾಡಿದೆ. ಸಂಜೆ 5 ಗಂಟೆಗೆ ನಯಾಬ್ ಸೈನಿ ಅವರು ಹರಿಯಾಣ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಯಾಬ್ ಸಿಂಗ್ ಸೈನಿ ಹಿಂದುಳಿದ ವರ್ಗದ ನಾಯಕರಾಗಿದ್ದಾರೆ. ಸದ್ಯ ಹರಿಯಾಣ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕುರುಕ್ಷೇತ್ರ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇಂದು ಸಿಎಂ ಖಟ್ಟರ್ ಮತ್ತು ಸಂಪುಟದ ಸಚಿವರು ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳ ನಂತರ ಸೈನಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 46 ಸದಸ್ಯರ ಅಗತ್ಯವಿದೆ. ಕಳೆದ ಬಾರಿ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾಗಿತ್ತು. ಸದ್ಯ 41 ಶಾಸಕರನ್ನು ಕಮಲ ಪಕ್ಷ ಹೊಂದಿದೆ. ಕಾಂಗ್ರೆಸ್ 30, ಜನನಾಯಕ ಜನತಾ ಪಕ್ಷ (ಜೆಜೆಪಿ) 10 ಮತ್ತು 7 ಪಕ್ಷೇತರರು, ಐಎನ್‌ಎಲ್‌ಡಿ ಮತ್ತು ಹರಿಯಾಣ ಲೋಕಿತ್ ಪಕ್ಷದ ತಲಾ ಒಬ್ಬ ಶಾಸಕರಿದ್ದಾರೆ.
ಬಿಜೆಪಿಯು ಜೆಜೆಪಿ ಜೊತೆಗೆ ಮೈತ್ರಿಕೊಂಡು ಸರ್ಕಾರ ರಚನೆ ಮಾಡಿತ್ತು. ಅಲ್ಲದೇ, ಪಕ್ಷೇತರ ಶಾಸಕರ ಬೆಂಬಲವನ್ನೂ ಸರ್ಕಾರ ಹೊಂದಿತ್ತು. ಪ್ರತಿಪಕ್ಷದಲ್ಲಿ ಕಾಂಗ್ರೆಸ್, ಐಎನ್‌ಎಲ್‌ಡಿ ಮತ್ತು ಹರಿಯಾಣ ಲೋಕಿತ್ ಪಕ್ಷ ಇತ್ತು. ಇಂದು ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿ - ಜೆಜೆಪಿ ಮೈತ್ರಿ ಮುರಿದು ಬಿದ್ದಿದೆ. ಇದರಿಂದ ಖಟ್ಟರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಬಿಜೆಪಿ ಹೈಕಮಾಂಡ್ ತರುಣ್ ಚುಗ್ ಮತ್ತು ಅರ್ಜುನ್ ಮುಂಡಾ ಅವರನ್ನು ಕೇಂದ್ರದಿಂದ ವೀಕ್ಷಕರನ್ನಾಗಿ ಮಾಡಿತ್ತು. ಇದರ ನಂತರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸೈನಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಜೆಪಿ ನಡುವೆ ಸೀಟು ಹಂಚಿಕೆ ಸಂಬಂಧ ಮೈತ್ರಿಯಲ್ಲಿ ಬಿರುಕು ಮೂಡಿದೆ. 2019ರ ಚುನಾವಣೆಯಲ್ಲಿ ರಾಜ್ಯದ ಎಲ್ಲ 10 ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆಗ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆಜೆಪಿ ತಾನು ಸ್ಪರ್ಧಿಸಿದ 7 ಕ್ಷೇತ್ರಗಳಲ್ಲಿ ಸೋಲು ಕಂಡಿತ್ತು. ಈ ಬಾರಿ ಬಿಜೆಪಿ ಮತ್ತೆ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಗೆ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಹರಿಯಾಣದಲ್ಲಿ ಮುರಿದುಬಿದ್ದ ಬಿಜೆಪಿ-ಜೆಜೆಪಿ ಮೈತ್ರಿ: ಸಿಎಂ ಖಟ್ಟರ್, ಸಂಪುಟ ಸದಸ್ಯರಿಂದ ಸಾಮೂಹಿಕ ರಾಜೀನಾಮೆ