ರಾಯಪುರ (ಛತ್ತೀಸ್ಗಢ):ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಪತ್ನಿಗೆ ಛತ್ತೀಸ್ಗಢ ಸಿವಿಲ್ ಸೊಸೈಟಿ (ಸಿಸಿಎಸ್) 850 ಕೋಟಿ ರೂ.ಗಳ ಲೀಗಲ್ ನೋಟಿಸ್ ನೀಡಿದೆ.
ಕಳೆದ ಸೋಮವಾರ ನವಜೋತ್ ಸಿಂಗ್ ಸಿಧು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, "ನನ್ನ ಪತ್ನಿ ನವಜೋತ್ ಕೌರ್ ಅವರ ಕ್ಯಾನ್ಸರ್ ಅನ್ನು ವಿಶೇಷ ಡಯಟ್ ಪ್ಲ್ಯಾನ್(ಆಹಾರ ಶೈಲಿ) ಅನುಸರಿಸುವ ಮೂಲಕ ಗುಣಪಡಿಸಲಾಗಿದೆ. ಇದು ಅವರ ಚಿಕಿತ್ಸೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ನಿಂಬೆರಸ, ಅರಿಶಿನ ಮತ್ತು ಬೇವನ್ನು ಒಳಗೊಂಡ ಆಹಾರದಿಂದ ಮಾರಣಾಂತಿಕ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು" ಎಂದು ಹೇಳಿದ್ದರು.
ಈ ಕುರಿತು ಸಿಸಿಎಸ್ ಸಂಚಾಲಕ ಡಾ.ಕುಲದೀಪ್ ಸೋಲಂಕಿ ಪ್ರಕ್ರಿಯಿಸಿ, "ನವಜೋತ್ ಸಿಂಗ್ ಸಿಧು ಅವರು ನೀಡಿರುವ ಹೇಳಿಕೆಗಳು ದಾರಿತಪ್ಪಿಸುವ ಮತ್ತು ಗೊಂದಲಮಯವಾದವುಗಳಾಗಿವೆ. ಇದು ಅಲೋಪತಿ ಔಷಧ ಮತ್ತು ಚಿಕಿತ್ಸೆಯ ಬಗ್ಗೆ ಜನರ ಮನಸ್ಸಿನಲ್ಲಿ ನಕಾರಾತ್ಮಕತೆ ಸೃಷ್ಟಿಸುವ ಸಾಧ್ಯತೆ ಇದೆ. ಅವರ ಈ ಹೇಳಿಕೆ ಕ್ಯಾನ್ಸರ್ ರೋಗಿಗಳು ಅಲೋಪತಿ ಔಷಧಗಳನ್ನು ತೆಗೆದುಕೊಳ್ಳುವುದನ್ನು ಮಧ್ಯದಲ್ಲೇ ನಿಲ್ಲಿಸಲು ಒತ್ತಾಯಿಸುತ್ತಿದೆ. ಇದು ಅವರ ಜೀವಕ್ಕೆ ಅಪಾಯವನ್ನು ತಂದೊಡ್ಡುತ್ತದೆ" ಎಂದು ಹೇಳಿದ್ದಾರೆ.