ಕರ್ನಾಟಕ

karnataka

By PTI

Published : 4 hours ago

ETV Bharat / bharat

ಸಾವರ್ಕರ್ ವಿರುದ್ಧ ಮಾನಹಾನಿ ಹೇಳಿಕೆ: ರಾಹುಲ್ ಗಾಂಧಿಗೆ ನಾಸಿಕ್ ಕೋರ್ಟ್ ಸಮನ್ಸ್ - Rahul Gandhi

ಹಿಂದುತ್ವ ಪ್ರತಿಪಾದಕ ವೀರ ಸಾವರ್ಕರ್​ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ರಾಹುಲ್​ ಗಾಂಧಿ ವಿರುದ್ಧ ದಾಖಲಾಗಿರುವ ಮಾನಹಾನಿ ಕೇಸ್​​ನಲ್ಲಿ ಕೋರ್ಟ್ ಸಮನ್ಸ್​ ಜಾರಿ ಮಾಡಿದೆ.

ರಾಹುಲ್ ಗಾಂಧಿಗೆ ನಾಸಿಕ್ ಕೋರ್ಟ್ ಸಮನ್ಸ್ ಜಾರಿ
ರಾಹುಲ್ ಗಾಂಧಿ (ETV Bharat)

ಮುಂಬೈ (ಮಹಾರಾಷ್ಟ್ರ):ಸ್ವಾತಂತ್ರ್ಯ ಹೋರಾಟಗಾರ, ಹಿಂದುತ್ವ ಪ್ರತಿಪಾದಕ ವಿನಾಯಕ ದಾಮೋದರ್ ಸಾವರ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನ್ಯಾಯಾಲಯವೊಂದು ಇಂದು ಸಮನ್ಸ್ ಜಾರಿ ಮಾಡಿದೆ.

ದೇಶಭಕ್ತ ವ್ಯಕ್ತಿಯ ವಿರುದ್ಧ ನೀಡಿರುವ ಹೇಳಿಕೆಯು ಮೇಲ್ನೋಟಕ್ಕೆ ಮಾನಹಾನಿಕರವಾಗಿದೆ ಎಂದು ನಾಸಿಕ್‌ನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ದೀಪಾಲಿ ಪರಿಮಳ್ ಕಡುಸ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್​ ಗಾಂಧಿ ವಿರುದ್ಧ ವಿಚಾರಣೆ ನಡೆಸಲು ಸಾಕಷ್ಟು ಆಧಾರಗಳಿವೆ. ಹೀಗಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 (ಮಾನನಷ್ಟ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಸೆಕ್ಷನ್​ಗಳಡಿ ವಿಚಾರಣೆ ನಡೆಸಲು ಅವಕಾಶವಿದೆ ಎಂದು ಕೋರ್ಟ್​ ಹೇಳಿದೆ.

ರಾಹುಲ್​​ ಗಾಂಧಿ ಅವರಿಗೆ ಸಮನ್ಸ್​ ಜಾರಿ ಮಾಡಿದ್ದರೂ, ಪ್ರಕರಣದ ಮುಂದಿನ ವಿಚಾರಣೆಯಂದು ಪ್ರತಿಪಕ್ಷ ನಾಯಕರೇ ಖುದ್ದಾಗಿ ಅಥವಾ ಅವರ ಕಾನೂನು ಪ್ರತಿನಿಧಿ ಹಾಜರಾಗಬೇಕೆ ಎಂಬುದರ ಬಗ್ಗೆ ಯಾವುದೇ ನಿರ್ಧಾರ ತಿಳಿಸಿಲ್ಲ.

ರಾಹುಲ್​​ ಗಾಂಧಿ ಹೇಳಿದ್ದೇನು?:2022 ರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ, ನನ್ನ ಹೆಸರು ಗಾಂಧಿ. ಸಾವರ್ಕರ್​ ಅಲ್ಲ. ಗಾಂಧಿ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ಸಾವರ್ಕರ್​​ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಅಲ್ಲದೇ ಕ್ಷಮಾದಾನ ಕೋರಿ ಪತ್ರವನ್ನೂ ಬರೆದಿದ್ದರು ಎಂದು ಹೇಳಿದ್ದರು.

ಇದರ ವಿರುದ್ಧ ಸಾವರ್ಕರ್​​ ಬೆಂಬಲಿಗ, ಎನ್​​ಜಿಒದ ನಿರ್ದೇಶಕರೊಬ್ಬರು ದೂರು ನೀಡಿದ್ದರು. ರಾಹುಲ್​​ ಗಾಂಧಿ ತಮ್ಮ ಹೇಳಿಕೆಯಲ್ಲಿ ವೀರ ಸಾವರ್ಕರ್ ಅವರ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಅವರು ಮಾಡಿದ ಉದಾತ್ತ ಕೆಲಸಗಳ ಜೊತೆಗೆ ಸಮಾಜಕ್ಕೆ ಅವರು ನೀಡಿದ ಕೊಡುಗೆಯನ್ನು ಹಾಳುಮಾಡುವ ಯತ್ನ ಇದಾಗಿದೆ ಎಂದು ಆರೋಪಿಸಿದ್ದರು.

ಸಾವರ್ಕರ್ ಅವರನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಂಶಾವಳಿ ಎಂಬ ರಾಹುಲ್​ ಗಾಂಧಿ ಹೇಳಿಕೆ ಮಾನಹಾನಿಕರವಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಿ ಎಂದು ದೂರುದಾರ ಕೋರಿದ್ದಾರೆ.

ಮೋದಿ ಕೇಸಲ್ಲಿ ಶಿಕ್ಷೆಗೀಡಾಗಿದ್ದ ರಾಹುಲ್:ಇದಕ್ಕೂ ಮೊದಲು, ಮೋದಿ ಹೆಸರಿನ ಪದಬಳಕೆ ಕೇಸಲ್ಲಿ ರಾಹುಲ್​ ಗಾಂಧಿ ಅವರು ಸಂಸತ್​ ಸ್ಥಾನದಿಂದ ವಜಾಗೊಂಡಿದ್ದರು. ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್​ನ ಜಿಲ್ಲಾ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್​​ ಓಂ ಬಿರ್ಲಾ ಅವರು ಕಾಂಗ್ರೆಸ್​ ಸಂಸದನಾಗಿದ್ದ ರಾಹುಲ್​ ಗಾಂಧಿ ಅವರನ್ನು ಹುದ್ದೆಯಿಂದ ಅನರ್ಹಗೊಳಿಸಿದ್ದರು.

ಇದನ್ನೂ ಓದಿ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!

ABOUT THE AUTHOR

...view details