ನವದೆಹಲಿ/ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದ್ದು, ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿ, ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ನಡೆದಿರುವ ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಹಗರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಹಾಗೂ ಜೆಡಿಎಸ್ ಸಂಸದರು ನವದೆಹಲಿಯಲ್ಲಿ ಸಂಸತ್ ಭವನದ ಎದುರು ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಜವಾದ ಬಣ್ಣ ಬಯಲಾಗಿದೆ. ಅವರು ತಮ್ಮಷ್ಟಕ್ಕೆ ತಾವೇ ಪ್ರಾಮಾಣಿಕರು ಎಂದು ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಾರೆ. ಇದು ಮೊದಲನೇಯದ್ದೇನಲ್ಲ, ಬಿಡಿಎನಲ್ಲಿ ರಿಡೂ ಮಾಡಿ ಸಿಲುಕಿಕೊಂಡಿದ್ದರು. ಆಗ ಆಯೋಗ ರಚನೆ ಮಾಡಿ ಪ್ರಕರಣ ಮುಚ್ಚಿ ಹಾಕಿದರು. ಈ ಮಧ್ಯೆ ಮಂಡ್ಯದಲ್ಲಿ ಮುಡಾದ ಹಗರಣ ಆಯಿತು. ಆಗ ಸಿದ್ದರಾಮಯ್ಯ ಅವರು ಸಿಬಿಐಗೆ ಕೊಟ್ಟರು. ಈಗ ಮೈಸೂರಿನಲ್ಲಿ ಮುಡಾ ಹಗರಣ ಆಗಿದೆ. ಅದನ್ನು ಯಾಕೆ ಸಿಬಿಐಗೆ ಕೊಡಬಾರದು ಎಂದು ಪ್ರಶ್ನಿಸಿದರು.
ಮಂಡ್ಯ ಮುಡಾದಲ್ಲಿ ಹಗರಣ ಆದರೆ ಸಿಬಿಐಗೆ ಕೊಡುತ್ತಾರೆ. ಮೈಸೂರು ಮುಡಾ ಹಗರಣ ಆದರೆ, ನ್ಯಾಯಾಂಗ ತನಿಖೆಗೆ ಕೊಡುತ್ತಾರೆ. ಇದನ್ನೂ ಸಿಬಿಐ ತನಿಖೆಗೆ ನೀಡಿ, ತನಿಖೆ ಮುಗಿಯುವವರೆಗೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು. ಮಂಡ್ಯದಲ್ಲಿ ನಡೆದ ಅಕ್ರಮದ ಆರೋಪ ಪ್ರತಿಪಕ್ಷದವರ ಮೇಲೆ ಇತ್ತು ಎಂದು ಅದನ್ನು ಸಿಬಿಐ ತನಿಖೆಗೆ ನೀಡಿದ್ದೀರಿ, ಮೈಸೂರಿನ ಮುಡಾದಲ್ಲಿ ನಡೆದ ಹಗರಣದಲ್ಲಿ ನಿಮ್ಮ ಹೆಸರಿದೆ ಎಂದು ತನಿಖೆಗೆ ಆಯೋಗ ರಚನೆ ಮಾಡುತ್ತೀರಾ? ರಾಜ್ಯದಲ್ಲಿ ಯಾವ ನ್ಯಾಯಾಂಗ ಆಯೋಗ ಯಾವ ಹಗರಣವನ್ನು ಬಯಲಿಗೆಳೆದಿದೆ, ಮುಡಾ ಹಗರಣ ಮುಚ್ಚಿ ಹಾಕುವ ಸಲುವಾಗಿ ನ್ಯಾಯಾಂಗ ಆಯೋಗ ರಚನೆ ಮಾಡಿದ್ದಾರೆ ಎಂದು ಆರೋಪಿಸಿದರು.