ಮೋತಿಹಾರಿ, ಬಿಹಾರ: ಶಿಕ್ಷಣದ ಗುಣಮಟ್ಟದ ಬಗ್ಗೆ ಬಿಹಾರ ಒತ್ತು ನೀಡುವತ್ತ ಮಾತನಾಡುತ್ತಿದ್ದರೆ, ಇತ್ತ ವಿದ್ಯಾರ್ಥಿಗಳ ಜೀವನ ರೂಪಿಸುವ ಸರ್ಕಾರಿ ಶಾಲೆ ಶಿಕ್ಷಕರು ಮಕ್ಕಳಿಗೆ ಶಬ್ದಗಳಿಗೆ ವಿಭಿನ್ನ ಅರ್ಥವನ್ನು ಹೇಳಿಕೊಡುವ ಮೂಲಕ ಅದರ ಗುಣಮಟ್ಟ ತಗ್ಗಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ಪೂರ್ವ ಚಂಪಾರಣ್ ಜಿಲ್ಲೆಯ ಢಾಕಾ ಬ್ಲಾಕ್‌ನ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಆಲ್ಕೋಹಾಲ್ ಕುರಿತು ಶಿಕ್ಷಕರು ನೀಡಿರುವ ಅರ್ಥ ಇದೀಗ ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಸದ್ದು ಮಾಡುತ್ತಿದೆ. ಸದ್ಯ ಈ ವಿಚಾರವನ್ನು ತೀರಾ ಗಂಭೀರವಾಗಿ ತೆಗೆದುಕೊಂಡಿರುವ ಶಿಕ್ಷಣಾಧಿಕಾರಿಗಳು ಈ ಸಂಬಂಧ ಶಿಕ್ಷಕರಿಂದ ವಿವರಣೆ ಕೇಳಿದ್ದಾರೆ.
ಆಲ್ಕೋಹಾಲ್ ಕುರಿತು ಅರ್ಥ: ಢಾಕಾ ಬ್ಲಾಕ್‌ನ ಜಮುವಾ ಮಿಡ್ಲಿ ಸ್ಕೂಲ್‌ನಲ್ಲಿ ಹಿಂದಿ ಪದಗಳ ಭಾಷಾ ವೈಶಿಷ್ಟತೆ ತಿಳಿಸಿರುವ ಫೋಟೋವೊಂದು ವೈರಲ್ ಆಗಿದೆ. ಇದರಲ್ಲಿ ಆಲ್ಕೋಹಾಲ್ ಕುರಿತು ವಿವರಣೆ ನೀಡಿರುವುದು ವಿಚಿತ್ರವಾಗಿದೆ. ಆರು ಹಿಂದಿ ಪದಗಳ ಅರ್ಥ ಬರೆದಿದ್ದು, ಮೊದಲ ಪದ ಹತ್ ಪಾವ್ ಪೂಲ್ನಾ (ಕೈ ಕಾಲು ನಡುಗುವುದು) ಎಂಬ ಪದಕ್ಕೆ ಪರ್ಯಾಯ ಅರ್ಥದಲ್ಲಿ ಸರಿಯಾದ ಸಮಯಕ್ಕೆ ಮದ್ಯ ಸಿಗದಿದ್ದರೆ ಎಂದು ಬರೆಯಲಾಗಿದೆ. ಮತ್ತೊಂದು ಪದ ಕಲೆಜಾ ತಂಡಾ ಹೋನಾ (ಗಂಟಲು ತಂಪಾಗುವುದು) ಕ್ಕೆ ಒಂದು ಪೆಗ್ ಗಂಟಲಿಗೆ ಇಳಿಸು ಎಂದು ಅರ್ಥ ಬರೆದಿದ್ದಾರೆ.