ಮೊರಾದಾಬಾದ್, ಉತ್ತರಪ್ರದೇಶ: ಶಾಲೆಗೆ ತೆರಳುತ್ತಿದ್ದ ಪ್ರಾಂಶುಪಾಲರನ್ನು ಹಗಲು ಹೊತ್ತಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯ ಮಜೋಲಾ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಕಾಲ್ನಡಿಗೆ ಮೂಲಕ ಶಾಲೆ ಹೋಗುತ್ತಿದ್ದ ಪ್ರಾಂಶುಪಾಲರ ಮೇಲೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ತಲೆಗೆ ಗುಂಡು ಹಾರಿಸಿದ್ದಾರೆ. ಇದರಿಂದ ಅವರು ರಸ್ತೆ ಮೇಲೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಾಂಶುಪಾಲರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮಜೋಳ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ದುಷ್ಕರ್ಮಿಗಳು, ಪ್ರಾಂಶುಪಾಲರ ಮೇಲೆ ಗುಂಡಿನ ದಾಳಿ ನಡೆಸಿ ಓಡಿ ಹೋಗುತ್ತಿರುವುದು ಕಂಡು ಬಂದಿದೆ.
ಪೊಲೀಸರು ಹೇಳುವುದೇನು?:ಮಜೋಲಾ ಪ್ರದೇಶದ ಬಿಜೆಪಿ ನಾಯಕ ಶಮಿ ಭಟ್ನಾಗರ್ ಅವರ ಶಾಲೆ ಇದೆ. ಶಬಾಬುಲ್ ಹಸನ್ ಇಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು. ಅವರ ಮನೆ ಶಾಲೆಯಿಂದ ಸುಮಾರು 250 ಮೀಟರ್ ದೂರದಲ್ಲಿದೆ. ಪೊಲೀಸರ ವರದಿ ಪ್ರಕಾರ, ಪ್ರತಿದಿನದಂತೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಕಾಲ್ನಡಿಗೆಯಲ್ಲಿ ಶಬಾಬುಲ್ ಹಸನ್ ಶಾಲೆಗೆ ಹೋಗುತ್ತಿದ್ದರು. ಈ ವೇಳೆ ಶಾಲೆಯಿಂದ ಸುಮಾರು 50 ಮೀಟರ್ ದೂರದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಿಂಬದಿಯಿಂದ ಪ್ರಾಂಶುಪಾಲರ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಆರು ಸೆಕೆಂಡ್‌ಗಳ ವಿಡಿಯೋ ವೈರಲ್;ಘಟನೆಯ ನಂತರ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದರು. ತಕ್ಷಣ ಪ್ರಾಂಶುಪಾಲರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಗೆ ಸಂಬಂಧಿಸಿದಂತೆ ಸುಮಾರು 6 ಸೆಕೆಂಡ್‌ಗಳ ವಿಡಿಯೋ ಕೂಡ ಹೊರಬಿದ್ದಿದೆ. ಇದರಲ್ಲಿ ಪ್ರಾಂಶುಪಾಲರು ಎಡಬದಿಯಿಂದ ರಸ್ತೆಯಲ್ಲಿ ಹೋಗುತ್ತಿರುವುದು ಕಂಡು ಬರುತ್ತಿದೆ. ಅಷ್ಟರಲ್ಲಿ ಹಿಂದಿನಿಂದ ಇಬ್ಬರು ಬೈಕ್ ಸವಾರರು ಬರುತ್ತಾರೆ. ಬೈಕ್ ಚಲಾಯಿಸುತ್ತಿದ್ದ ಕಿಡಿಗೇಡಿ ಹೆಲ್ಮೆಟ್ ಧರಿಸಿದ್ದು, ಹಿಂದೆ ಕುಳಿತಿದ್ದ ಇನ್ನೊಬ್ಬ ಬಾಯಿಗೆ ಟವಲ್ ಕಟ್ಟಿಕೊಂಡಿದ್ದ ಎಂದು ತಿಳಿದು ಬಂದಿದೆ.
ಬೈಕ್ ಸವಾರರಿಬ್ಬರೂ ನಡೆದುಕೊಂಡು ಹೋಗುತ್ತಿದ್ದ ಪ್ರಿನ್ಸಿಪಾಲರ ಹತ್ತಿರ ಹೋಗಿದ್ದಾರೆ. ಇದ್ದಕ್ಕಿದ್ದಂತೆ ಹಿಂದೆ ಕುಳಿತಿದ್ದ ಪಾತಕಿ ತನ್ನ ಪಿಸ್ತೂಲ್ ತೆಗೆದು ಶಬಾಬುಲ್ ಹಸನ್ ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡು ತಗುಲಿದ ತಕ್ಷಣ ಶಬಾಬುಲ್ ಅವರು ಮುಖ ಕೆಳಗೆ ಮಾಡಿ ನೆಲಕ್ಕೆ ಬಿದ್ದಿದ್ದಾರೆ.
ವಿದ್ಯಾರ್ಥಿ ಆತ್ಮಹತ್ಯೆಗೂ ಈ ಹತ್ಯೆಗೂ ಏನಾದರೂ ಇದೆಯಾ ಸಂಬಂಧ?:4 ತಿಂಗಳ ಹಿಂದೆ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ವಿಚಾರ ಮಜೋಲಾ ಪೊಲೀಸರ ಪ್ರಾಥಮಿಕ ತನಿಖೆಯಿಂದ ಇದೀಗ ಬೆಳಕಿಗೆ ಬಂದಿದೆ. ಈ ವೇಳೆ ಪ್ರಾಂಶುಪಾಲರು ಮಗನನ್ನು ನಿಂದಿಸಿದ್ದರು ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕನ ಕುಟುಂಬಸ್ಥರು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಪ್ರಾಂಶುಪಾಲರ ವಿರುದ್ಧ ಮಜೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ದೃಷ್ಟಿಕೋನದಿಂದಲೂ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆ ಗೆ ಸುಮಾರು 5 ತಂಡಗಳನ್ನು ರಚಿಸಿದ್ದಾರೆ.
ಇದನ್ನು ಓದಿ:ನಕಲಿ ದಾಖಲೆ ಕೊಟ್ಟು 10 ವರ್ಷ ಕಾಲ ಐಟಿಬಿಪಿಯಲ್ಲಿ ಕೆಲಸ ಮಾಡಿದ ಖದೀಮ: ವಂಚನೆ ಬಯಲಾಗಿದ್ದು ಹೀಗೆ