ನವದೆಹಲಿ:ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ದೆಹಲಿ ನಿವಾಸದಲ್ಲಿ ಇಂದು ತೀವ್ರ ಶೋಧ ನಡೆಸಿದ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು 36 ಲಕ್ಷ ರೂಪಾಯಿ, ಒಂದು ಐಷಾರಾಮಿ ಕಾರು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇಡಿ ಅಧಿಕಾರಿಗಳು ಸೋಮವಾರದಿಂದ ದಕ್ಷಿಣ ದೆಹಲಿಯಲ್ಲಿರುವ ಸೊರೇನ್ ನಿವಾಸವನ್ನು ಜಾಲಾಡುತ್ತಿದ್ದಾರೆ. ಭೂ ಅವ್ಯವಹಾರ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹೇಮಂತ್ ಸೊರೇನ್ ಅವರನ್ನು ಪ್ರಶ್ನಿಸಲು ಇಡಿ ಕಾರ್ಯನಿರತವಾಗಿದೆ.
ಕಾರ್ಯಾಚರಣೆ ವೇಳೆ ಸುಮಾರು 36 ಲಕ್ಷ ರೂಪಾಯಿ ನಗದು, ಹರಿಯಾಣ ನೋಂದಣಿಯ ಬಿಎಂಡಬ್ಲ್ಯೂ ಕಾರು ಜಪ್ತಿ ಮಾಡಲಾಗಿದೆ. ಕೆಲವು ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.