ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ 250 ಸ್ಥಾನಗಳಲ್ಲಿ ಸ್ಫರ್ಧೆ: ರಾಜ್​ ಠಾಕ್ರೆ ಘೋಷಣೆ - Raj Thackeray - RAJ THACKERAY

ಮಹಾರಾಷ್ಟ್ರ ವಿಧಾನಸಭೆ ಸನ್ನಿಹಿತವಾಗಿದ್ದು, ರಾಜಕೀಯ ಪಕ್ಷಗಳು ಸ್ಪರ್ಧೆಗೆ ತಂತ್ರ ರೂಪಿಸುತ್ತಿವೆ. ಈಗಾಗಲೇ ಎನ್​ಸಿಪಿ, ಶಿವಸೇನೆ ಇಬ್ಭಾಗವಾಗಿವೆ. ಬಿಜೆಪಿ ಜೊತೆಗಿದ್ದ ರಾಜ್​ ಠಾಕ್ರೆ ಅವರ ಎಂಎನ್​ಎಸ್​ ಸ್ವತಂತ್ರ ಸ್ಪರ್ಧೆ ಘೋಷಿಸಿದೆ.

ರಾಜ್​ ಠಾಕ್ರೆ
ರಾಜ್​ ಠಾಕ್ರೆ (ANI)

By ANI

Published : Jul 25, 2024, 6:17 PM IST

ಮುಂಬೈ (ಮಹಾರಾಷ್ಟ್ರ):ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್​ಎಸ್​) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ 200 ರಿಂದ 250 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಗುರುವಾರ ಘೋಷಿಸಿದೆ.

ಈ ಬಗ್ಗೆ ಮಾತನಾಡಿರುವ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ - ಶಿವಸೇನೆ - ಎನ್​ಸಿಪಿ ಸಮ್ಮಿಶ್ರ ಸರ್ಕಾರವು ಅಭಿವೃದ್ಧಿಯನ್ನು ಮರೆತುಬಿಟ್ಟಿದೆ. ಹೀಗಾಗಿ ನಾವು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಮಹಾಯುತಿ ಸರ್ಕಾರಕ್ಕೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಹಣವಿಲ್ಲ ಎಂದರು. ಹಿರಿಯ ರಾಜಕಾರಣಿ ಶರದ್​ ಪವಾರ್​ ಅವರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಆಂತರಿಕ ಘರ್ಷಣೆಗಳ ಕುರಿತು ಪ್ರತಿಕ್ರಿಯಿಸಿ, ಲಾಡ್ಲಾ ಭಾಯ್ ಮತ್ತು ಬೆಹೆನ್ ಇಬ್ಬರೂ ಒಟ್ಟಿಗೆ ಇದ್ದರೆ ಪಕ್ಷವು ವಿಭಜನೆಯಾಗುತ್ತಿರಲಿಲ್ಲ ಎಂದು ಕಿಚಾಯಿಸಿದರು.

ಯಾವ ಶಾಸಕರು, ಎಲ್ಲಿದ್ದಾರೆ ಗೊತ್ತಿಲ್ಲ?:ಪ್ರಸ್ತುತ ರಾಜಕೀಯ ಸನ್ನಿವೇಶ ಗಮನಿಸಿದರೆ, ಯಾವ ಶಾಸಕರು ಯಾವ ಪಕ್ಷದಲ್ಲಿದ್ದಾರೆ ಎಂಬುದನ್ನು ಯಾರೂ ಗುರುತಿಸಲು ಸಾಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಪಕ್ಷಗಳ ನಡುವೆ ಪಕ್ಷಾಂತರದ ಜಟಾಪಟಿ ನಡೆಯಲಿದೆ. ಯಾರು ಯಾವ ಪಕ್ಷಕ್ಕೆ ವಲಸೆ ಹೋಗುತ್ತಾರೆ ಎಂಬುದು ಚುನಾವಣೆ ಘೋಷಣೆಯಾದ ಬಳಿಕ ತಿಳಿಯುತ್ತದೆ ಎಂದರು.

ತಮ್ಮ ಎಂಎನ್​ಎಸ್​ ಪಕ್ಷದಲ್ಲಿ ಪಕ್ಷಾಂತರಗಳ ಊಹಾಪೋಹದ ಬಗ್ಗೆ ಮಾತನಾಡಿ, "ನನ್ನ ಪಕ್ಷದವರನ್ನು ಸೆಳೆಯಲು ಬಯಸಿದರೆ ಅಥವಾ ಯಾರಾದರೂ ಪಕ್ಷ ಬಿಡಲು ಮುಂದಾಗಿದ್ದರೆ ಅವರಿಗೆ ನಾನೇ ಕೆಂಪು ಹಾಸು ಹಾಕಿ ಬೀಳ್ಕೊಡುವೆ. ಅವರು ಧೈರ್ಯವಾಗಿ ಪಕ್ಷ ತೊರೆಯಬಹುದು ಎಂದು ನೇರವಾಗಿ ಹೇಳಿದರು.

ಜಿಲ್ಲಾವಾರು ಸಮೀಕ್ಷೆ:ಚುನಾವಣೆಗೂ ಮೊದಲು ಜಿಲ್ಲಾವಾರು ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ನಡೆಸಲು ಪ್ರತಿ ಜಿಲ್ಲೆಗೆ 4 ರಿಂದ 5 ಸದಸ್ಯರನ್ನು ನೇಮಿಸಲಾಗಿದೆ. ಅವರು ಆಯಾ ಪ್ರದೇಶದ ಪ್ರಮುಖರು ಮತ್ತು ಜನರೊಂದಿಗೆ ಚರ್ಚೆ ನಡೆಸಲಿದ್ದಾರೆ. ತಂಡವು ಎರಡು ಬಾರಿ ಸಮೀಕ್ಷೆ ನಡೆಸಲಿದೆ. ಇದರಿಂದ ಪಕ್ಷದ ಬಗ್ಗೆ ನಿಜವಾದ ಒಲವು ತಿಳಿಯಲಿದೆ ಎಂದರು.

ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಚುನಾವಣೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಆಗಸ್ಟ್ 1 ರಿಂದ ರಾಜ್ಯ ಪ್ರವಾಸ ಪ್ರಾರಂಭಿಸುವುದಾಗಿ ರಾಜ್​ ಠಾಕ್ರೆ ಘೋಷಿಸಿದರು. ಚುನಾವಣೆಯಲ್ಲಿ 200 ರಿಂದ 250 ಸ್ಥಾನಗಳಲ್ಲಿ ಪಕ್ಷ ಸ್ಪರ್ಧೆ ಮಾಡಲಿದೆ. ಯಾವುದೇ ಬೆಲೆ ತೆತ್ತಾದರೂ ಪಕ್ಷದ ಕಾರ್ಯಕರ್ತರನ್ನು ಅಧಿಕಾರದಲ್ಲಿ ಕೂರಿಸಲು ಪ್ರಯತ್ನಿಸುವೆ ಎಂದು ಹೇಳಿದರು.

2019ರ ವಿಧಾನಸಭಾ ಚುನಾವಣೆಯಲ್ಲಿ ಎಂಎನ್‌ಎಸ್ ಕೇವಲ 1 ಸ್ಥಾನವನ್ನು ಮಾತ್ರ ಗೆದ್ದಿತ್ತು. ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಎಂಎನ್‌ಎಸ್ ಬಿಜೆಪಿಗೆ ಬೆಂಬಲ ನೀಡಿತ್ತು. 288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಪ್ರಸ್ತುತ ರಾಜ್ಯ ವಿಧಾನಸಭೆಯ ಅಧಿಕಾರಾವಧಿಯು 2024ಕ್ಕೆ ಕೊನೆಗೊಳ್ಳಲಿದೆ.

ಇದನ್ನೂ ಓದಿ:ಪ್ರಶಸ್ತಿ ಪ್ರದಾನ ನಡೆಯುವ ದರ್ಬಾರ್​ ಹಾಲ್​ ಇನ್ನು 'ಗಣತಂತ್ರ ಮಂಟಪ'; ಅಶೋಕ್​​ ಹಾಲ್​ ಹೆಸರೂ ಬದಲು - Rashtrapati Bhavan halls Rename

ABOUT THE AUTHOR

...view details