ಹಲ್ದ್ವಾನಿ(ಉತ್ತರಾಖಂಡ):ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯ ಸುಶೀಲಾ ತಿವಾರಿ ಎಂಬ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಅರುಣ್ ಪಾಠಕ್ (34) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯು ಆಸ್ಪತ್ರೆಯಲ್ಲಿದ್ದ ವೈದ್ಯರ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಮೊಬೈಲ್, ಪವರ್ ಬ್ಯಾಂಕ್, ಐಫೋನ್ ಸೇರಿದಂತೆ ಬೆಲೆಬಾಳುವ ಉಪಕರಣಗಳನ್ನು ಎಗರಿಸಿದ್ದನು. ಈತನ ಹಿನ್ನೆಲೆ ತಿಳಿದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿಗೆ ಒಡೆಯನಾಗಿರುವ ಆರೋಪಿ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ.
ಏ.22ರಂದು ಸುಶೀಲಾ ತಿವಾರಿ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಡಾ.ರಾಹುಲ್ ಸಿಂಗ್ ಎಂಬುವರು ಕಳ್ಳತನ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತುರ್ತು ಚಿಕಿತ್ಸಾ ವಿಭಾಗದ ವೈದ್ಯರ ಕೊಠಡಿಯಲ್ಲಿದ್ದ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಯಾರೋ ಕದ್ದೊಯ್ದಿದ್ದರು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನೂ ಒಪ್ಪಿಸಿದ್ದರು. ಕೊತ್ವಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತಂಡ ರಚಿಸಿದ್ದರು. ಆಸ್ಪತ್ರೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅರುಣ್ ಪಾಠಕ್ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.