ಬಂಡಿಪೋರಾ, ಶ್ರೀನಗರ:ಭಾನುವಾರ ರಾತ್ರಿ ಜಿಲ್ಲೆಯ ಆರಗಾಂ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು. ಆ ಸಮಯದಲ್ಲಿ ಸೇನೆ ಉಗ್ರನೊಬ್ಬನನ್ನು ಬೇಟೆ ಆಡಿದ್ದವು. ಸದ್ಯ ಆ ಉಗ್ರನ ಬಗ್ಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಡಿಪೋರಾ ಎನ್‌ಕೌಂಟರ್‌ನಲ್ಲಿ ಹತನಾದ ಉಗ್ರ ಹಲವಾರು ಉದ್ದೇಶಿತ ಹತ್ಯೆಗಳಲ್ಲಿ ಭಾಗಿಯಾಗಿರುವುದು ಮತ್ತು ಉಗ್ರರ ನೇಮಕಾತಿಯಲ್ಲಿ ಈತನ ಕೈವಾಡ ಇರುವುದು ತಿಳಿದು ಬಂದಿದೆ. ಅಷ್ಟೇ ಅಲ್ಲ ಈ ಉಗ್ರನ ಹತ್ಯೆಯಿಂದ ಭದ್ರತಾ ಪಡೆಗಳಿಗೆ ದೊಡ್ಡ ಯಶಸ್ಸು ದೊರೆತಂತಾಗಿದೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.
ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ 3ನೇ ಸೆಕ್ಟರ್ ಕಮಾಂಡರ್ ವಿಪುಲ್ ತ್ಯಾಗಿ, ಭದ್ರತಾ ಪಡೆಗಳು ನಿರಂತರವಾಗಿ ಈ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಸುಳಿವುಗಳನ್ನು ಪಡೆಯುತ್ತಿವೆ. ಹತನಾಗಿರುವ ಉಮರ್ ಹಲವಾರು ಹತ್ಯೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸ್ಥಳೀಯ ಜನರು ಭಯೋತ್ಪಾದಕನನ್ನು ತಟಸ್ಥಗೊಳಿಸಲು ಭದ್ರತಾ ಪಡೆಗಳಿಗೆ ಸಹಾಯ ಮಾಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಎಸ್‌ಎಸ್‌ಪಿ ಬಂಡಿಪೋರಾ ಲಕ್ಷಯ್ ಶರ್ಮಾ ಮತ್ತು ಕಮಾಂಡೆಂಟ್ 3 ನೇ ಬಿಎನ್ ಸಿಆರ್‌ಪಿಎಫ್ ಉಪಸ್ಥಿತರಿದ್ದರು.