ಸಾಂಗ್ಲಿ (ಮಹಾರಾಷ್ಟ್ರ):ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ ಮಧ್ಯರಾತ್ರಿ ಸಾಂಗ್ಲಿಯ ತಾಸಗಾಂವ್‌ನ ಚಿಂಚಣಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮೃತರಲ್ಲಿ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಸೇರಿದ್ದಾರೆ.
ವಾಹನದಲ್ಲಿವರೆಲ್ಲರೂ ಕವತೆಮಹಂಕಲ್ ತಾಲೂಕಿನ ಕೋಕಲೆಯಿಂದ ತಾಸಗಾಂವ್‌ಗೆ ತಮ್ಮ ಸೋದರ ಸಂಬಂಧಿಯ ಹುಟ್ಟುಹಬ್ಬ ಆಚರಣೆ ಬಳಿಕ ಹಿಂತಿರುಗುತ್ತಿದ್ದರು. ಈ ವೇಳೆ ಪಾಟೀಲ ಕುಟುಂಬದ ಕಾರು ಚಿಂಚಣಿ ಬಳಿಯ ಟಕರಿ ನಾಲೆಗೆ ಬಿದ್ದಿದೆ. ಮೃತರನ್ನು ರಾಜೇಂದ್ರ ಜಗನ್ನಾಥ ಪಾಟೀಲ (ವಯಸ್ಸು 60), ಪತ್ನಿ ಸುಜಾತಾ ರಾಜೇಂದ್ರ ಪಾಟೀಲ (ವ. 55), ಪ್ರಿಯಾಂಕಾ ಅವಧೂತ ಖರಡೆ (30), ಮೊಮ್ಮಗ ಧ್ರುವ (3), ರಾಜ್ವಿ (2), ಕಾರ್ತಿಕಿ (1) ಎಂದು ಗುರುತಿಸಲಾಗಿದೆ. ಸ್ವಪ್ನಾಲಿ ವಿಕಾಸ್ ಭೋಸ್ಲೆ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ ಚಿಂಚಣಿ ಗ್ರಾಮದ ಕೆಲವರು ಬೆಳಗ್ಗೆ ವಾಕಿಂಗ್‌ಗೆ ತೆರಳಿದಾಗ ಅಪಘಾತ ನಡೆದಿರುವುದು ಬೆಳಕಿಗೆ ಬಂದಿದೆ.
ಹುಟ್ಟುಹಬ್ಬ ಆಚರಿಸಿ ವಾಪಸಾಗುತ್ತಿದ್ದ ಕುಟುಂಬ: ತಾಸಗಾಂವದಲ್ಲಿ ವಾಸವಾಗಿರುವ ಎಂಜಿನಿಯರ್ ರಾಜೇಂದ್ರ ಪಾಟೀಲ ಅವರ ಕುಟುಂಬ ಕಾವಟೆ ಮಹಾನಕಲ್ ತಾಲೂಕಿನ ಕೋಕಲೆ ಗ್ರಾಮಕ್ಕೆ ಹುಟ್ಟುಹಬ್ಬ ಆಚರಿಸಲು ತೆರಳಿದ್ದರು. ಕುಟುಂಬ ಸಮೇತರಾಗಿ ಹುಟ್ಟುಹಬ್ಬ ಆಚರಿಸಿದ ಬಳಿಕ ವಾಪಸಾಗುತ್ತಿದ್ದರು. ಈ ವೇಳೆ ತಾಸಗಾಂವ್ ಮನೆಜೂರಿ ಹೆದ್ದಾರಿಯಲ್ಲಿ ಚಿಂಚಣಿ ಬಳಿಯ ರಾಜೇಂದ್ರ ಪಾಟೀಲ ಅವರ ಕಾರು ನಿಯಂತ್ರಣ ತಪ್ಪಿ ಟಕರಿ ನಾಲೆಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹುಟ್ಟುಹಬ್ಬದಂದೇ ಮಗು ಸಾವು: ರಾಜೇಂದ್ರ ಪಾಟೀಲ ಅವರ ಪುತ್ರಿ ಸ್ವಪ್ನಲಿ ಕಿರಣ ಭೋಸ್ಲೆ ಅವರ ಮಾವ ಕಾವಟೆ ಮಹಾನಕಲ್ ತಾಲೂಕಿನ ಕೋಕಲೆಯಲ್ಲಿದ್ದಾರೆ. ಸ್ವಪ್ನಾಲಿ ಭೋಸ್ಲೆ ಅವರ 2 ವರ್ಷದ ಮಗಳು ರಾಜ್ವಿಯ ಹುಟ್ಟುಹಬ್ಬವನ್ನು ಮಂಗಳವಾರ ಏರ್ಪಡಿಸಲಾಗಿತ್ತು. ಅದಕ್ಕಾಗಿ ಪಾಟೀಲ್ ಕುಟುಂಬ ಕೋಕಲೆಗೆ ತೆರಳಿತ್ತು. ರಾಜೇಂದ್ರ ಪಾಟೀಲ್ ಅವರು ಮೊಮ್ಮಗಳ ಹುಟ್ಟುಹಬ್ಬವನ್ನು ಮೊಮ್ಮಗ ಮತ್ತು ಮಗಳ ಜೊತೆ ಆಚರಿಸಿ ತಡರಾತ್ರಿ ಕುಟುಂಬ ಸಮೇತ ತಾಸಗಾಂವ್‌ಗೆ ವಾಪಸಾಗುತ್ತಿದ್ದರು. ಈ ವೇಳೆ ಕಾರು ಕಾಲುವೆಗೆ ಬಿದ್ದು ದುರಂತ ಸಂಭವಿಸಿದೆ. ಇದರಲ್ಲಿ ಪಾಟೀಲ್ ಅವರ ಕುಟುಂಬದವರು ಮತ್ತು ಮೊಮ್ಮಗಳು ರಾಜ್ವಿ ಭೋಸ್ಲೆ ಸಹ ಸಾವನ್ನಪ್ಪಿದ್ದಾಳೆ. ಆದರೆ, ರಾಜ್ವಿ ತಾಯಿ ಸ್ವಪ್ನಾಲಿ ಭೋಸ್ಲೆ ಅವರು ಅಪಘಾತದಿಂದ ಬದುಕುಳಿದಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಸಾಂಗ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಓದಿ:ವಾರದ ಹಿಂದಷ್ಟೇ ಮದುವೆಯಾದ ವ್ಯಕ್ತಿಯಿಂದ ಮಧ್ಯರಾತ್ರಿ 8 ಮಂದಿ ಸಂಬಂಧಿಕರ ಹತ್ಯೆ; ಮಧ್ಯಪ್ರದೇಶದಲ್ಲಿ ಭೀಕರ ನರಮೇಧ - Chhindwara Murder Case