ನವದೆಹಲಿ:ವಿದ್ಯಾರ್ಥಿಗಳ ದಂಗೆಗೆ ಹೊತ್ತಿ ಉರಿಯುತ್ತಿರುವ ಬಾಂಗ್ಲಾದೇಶದಲ್ಲಿ 19 ಸಾವಿರಕ್ಕೂ ಅಧಿಕ ಭಾರತೀಯರಿದ್ದಾರೆ. ಅದರಲ್ಲಿ 9 ಸಾವಿರ ವಿದ್ಯಾರ್ಥಿಗಳಿದ್ದಾರೆ. ಎಲ್ಲ ಭಾರತೀಯರ ಜೊತೆಗೆ ಸಂಪರ್ಕ ಹೊಂದಿದ್ದೇವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ನೆರೆ ರಾಷ್ಟ್ರದ ಉದ್ರಿಕ್ತ ಪರಿಸ್ಥಿತಿಯ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟ ಆರಂಭವಾದ ಬಳಿಕ ಹೆಚ್ಚಿನ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ. ಅಲ್ಲಿಯೇ ಸಿಲುಕಿರುವ ಭಾರತೀಯರ ಜೊತೆಗೆ ರಾಯಭಾರ ಕಚೇರಿ ಅಧಿಕಾರಿಗಳು ಸಂಪರ್ಕ ಹೊಂದಿದ್ದಾರೆ ಎಂದು ಹೇಳಿದರು.
ಅಂತಿಮ ಕ್ಷಣದಲ್ಲಿ ಅನುಮತಿ ಕೇಳಿದ ಹಸೀನಾ:ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಕೊನೆ ಗಳಿಗೆಯಲ್ಲಿ ಭಾರತಕ್ಕೆ ಬರುವ ಬಗ್ಗೆ ಮಾಹಿತಿ ನೀಡಿದರು. ತಮ್ಮ ದೇಶಕ್ಕೆ ಬರಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ ಬಳಿಕ ಸೋಮವಾರ ಸಂಜೆ ಅವರು ಇಲ್ಲಿಗೆ ಆಗಮಿಸಿದರು ಎಂದರು.
ಆಗಸ್ಟ್ 5ರಂದು ಕರ್ಫ್ಯೂ ಹೊರತಾಗಿಯೂ ರಾಜಧಾನಿ ಢಾಕಾದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಭದ್ರತಾ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮಾತುಕತೆ ಬಳಿಕ, ಶೇಖ್ ಹಸೀನಾ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇದಾದ ಬಳಿಕ ಅವರು ಇಲ್ಲಿಗೆ ಬರುವ ಬಗ್ಗೆ ಅನುಮತಿ ಕೇಳಿದರು. ಬಾಂಗ್ಲಾದೇಶದ ಅಧಿಕಾರಿಗಳ ಜೊತೆಗೆ ಅವರು ದೆಹಲಿಗೆ ಬಂದರು ಎಂದು ಮಾಹಿತಿ ಹಂಚಿಕೊಂಡರು.
ಬಾಂಗ್ಲಾ ಪರಿಸ್ಥಿತಿ ಬಗ್ಗೆ ನಿಗಾ:ನೆರೆಯ ರಾಷ್ಟ್ರಗವಾಗಿರುವ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸರ್ಕಾರ ನಿಗಾ ಇಟ್ಟಿದೆ. ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ನಿಕಟವಾಗಿದೆ. ನಮ್ಮ ಐದು ರಾಜ್ಯಗಳೊಂದಿಗೆ ಆ ದೇಶ ಗಡಿ ಹಂಚಿಕೊಂಡಿದ್ದು, ಭಾರತೀಯರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2024ರ ಜನವರಿಯಲ್ಲಿ ನಡೆದ ಚುನಾವಣೆಯ ನಂತರ, ರಾಜಕೀಯ ಉದ್ವಿಗ್ನತೆ ಹೆಚ್ಚಿದೆ. ಇದೀಗ ವಿದ್ಯಾರ್ಥಿಗಳ ಚಳವಳಿಯು ತೀವ್ರ ಹಿಂಸಾತ್ಮಕ ರೂಪ ಪಡೆದುಕೊಂಡಿದೆ ಎಂದರು.
ಢಾಕಾದಲ್ಲಿನ ಭಾರತೀಯ ಹೈಕಮಿಷನ್ ಜೊತೆಗೆ, ಚಿತ್ತಗಾಂಗ್, ರಾಜ್‌ಶಾಹಿ, ಖುಲ್ನಾ ಮತ್ತು ಸಿಲ್ಹೆಟ್‌ನಲ್ಲಿರುವ ಸಹಾಯಕ ಹೈಕಮಿಷನ್‌ಗಳ ಅಧಿಕಾರಿಗಳು ನಮ್ಮ ಪ್ರಜೆಗಳ ಜೊತೆಯಲ್ಲಿ ಸಂಪರ್ಕದಲ್ಲಿದ್ದಾರೆ. ನಮ್ಮ ಕಚೇರಿಗಳಿಗೆ ಅಲ್ಲಿನ ಭದ್ರತಾ ಪಡೆಗಳು ರಕ್ಷಣೆ ನೀಡುತ್ತವೆ ಎಂಬ ನಿರೀಕ್ಷೆ ಇದೆ. ದೇಶವು ಶೀಘ್ರದಲ್ಲೇ ಮತ್ತೆ ಸಹಜಸ್ಥಿತಿಗೆ ಬರಲಿದೆ ಎಂಬ ಆಶಾಭಾವನೆ ಇದೆ ಎಂದು ಜೈಶಂಕರ್ ಹೇಳಿದರು.
ಇದನ್ನೂ ಓದಿ:ಬಾಂಗ್ಲಾದೇಶ ಸಂಸತ್ ವಿಸರ್ಜನೆ: ಮಾಜಿ ಪ್ರಧಾನಿ ಖಲೀದಾ ಜಿಯಾ, ಬಂಧಿತ ಪ್ರತಿಭಟನಾಕಾರರ ಬಿಡುಗಡೆ - Bangladesh Parliament Dissolved