ಕೋಲ್ಕತ್ತಾ (ಪಶ್ಚಿಮಬಂಗಾಳ):ಲೋಕಸಭಾ ಚುನಾವಣೆ ಕಾವು ದಿನೆ ದಿನೇ ರಂಗೇರುತ್ತಿದೆ. ಐದು ಹಂತದ ಮತದಾನ ಮುಗಿದಿದ್ದು, ಇನ್ನೆರಡು ಹಂತಗಳು ಬಾಕಿ ಇವೆ. ಪಶ್ಚಿಮಬಂಗಾಳದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು, ಇಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನೇರ ಸ್ಪರ್ಧಾಳುಗಳಾಗಿವೆ.
ಎರಡೂ ಪಕ್ಷಗಳು ಜಿದ್ದಿಗೆ ಬಿದ್ದಂತೆ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಕೆಲವೆಡೆ ಭಾರೀ ವಾಗ್ವಾದಕ್ಕೂ ಕಾರಣವಾಗಿದೆ. ಹೈಕೋರ್ಟ್ ಮಾಜಿ ನ್ಯಾಯಾಧೀಶ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ಅಭಿಜಿತ್ ಗಂಗೋಪಾಧ್ಯಾಯ ಅವರು ಸಿಎಂ ಮಮತಾ ಬ್ಯಾನರ್ಜಿ ಅವರ ವಿರುದ್ಧ ನೀಡಿದ ಹೇಳಿಕೆಗಳನ್ನು ಕೇಂದ್ರ ಚುನಾವಣಾ ಆಯೋಗ ಖಂಡಿಸಿದೆ. ಜೊತೆಗೆ ಒಂದು ದಿನದ ಮಟ್ಟಿಗೆ ಪ್ರಚಾರದಿಂದ ನಿರ್ಬಂಧಿಸಿದೆ.
ಈ ಬಗ್ಗೆ ಮಂಗಳವಾರ ಆದೇಶ ಹೊರಡಿಸಿರುವ ಆಯೋಗ, ಮೇ 21 ರಿಂದ ಸಂಜೆ 5ಗಂಟೆಯಿಂದ ಹಿಡಿದು ಮುಂದಿನ 24 ಗಂಟೆಗಳ ಅವಧಿಗೆ ಬಿಜೆಪಿ ಅಭ್ಯರ್ಥಿ ಪ್ರಚಾರ ಮಾಡುವಂತಿಲ್ಲ ಎಂದು ಸೂಚಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಅಭಿಜಿಯ್ ಗಂಗೋಪಾಧ್ಯಾಯ ಅವರು ಮುಂದಿನ ಭಾಷಣಗಳಲ್ಲಿ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.
ನೋಟಿಸ್ ನೀಡಿದ ಆಯೋಗ:ಚುನಾವಣಾ ಪ್ರಚಾರದಲ್ಲಿ ಮಮತಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಅಭ್ಯರ್ಥಿ ವಿರುದ್ಧ ಚುನಾವಣಾ ಆಯೋಗ ಮೇ 17 ರಂದು ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್‌ಗೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು ಉತ್ತರ ಕೂಡ ನೀಡಿದ್ದರು. ಹೇಳಿಕೆಗಳನ್ನು ಗಮನಿಸಿದ ಬಳಿಕ ಇಂದು ಪ್ರಚಾರ ನಿರ್ಬಂಧ ಶಿಕ್ಷೆ ವಿಧಿಸಿದೆ.