ಎರ್ನಾಕುಲಂ (ಕೇರಳ): ಚುರಕಾಡ್ ಪ್ರದೇಶದಲ್ಲಿ ತ್ರಿಪ್ಪುನಿತುರಾ ಪಟಾಕಿ ಸಂಗ್ರಹ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 12 ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಪುತ್ತಿಕಾವ್ ದೇವಸ್ಥಾನದ ಉತ್ಸವಕ್ಕೆ ಸಂಬಂಧಿಸಿದಂತೆ ಪಟಾಕಿ ಸಂಗ್ರಹಿಸುತ್ತಿದ್ದ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದೆ. ಅಂಗಡಿಗೆ ಪಟಾಕಿಗಳನ್ನು ಇಳಿಸುತ್ತಿರುವಾಗ ವಾಹನದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಾಗಿದೆ. ಭಾರೀ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿದ್ದಾರೆ. ಇಂದು ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದೆ.
ಪೊಲೀಸರು ಹೇಳಿದ್ದೇನು?: ಸ್ಫೋಟದಲ್ಲಿ ಕನಿಷ್ಠ ಆರು ಮನೆಗಳು ಮತ್ತು ಕೆಲವು ಅಂಗಡಿಗಳು ಹಾನಿಗೊಳಗಾಗಿವೆ ಮತ್ತು ಒಂದು ಕಾರು ಸೇರಿದಂತೆ ಎರಡು ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಇದೀಗ ಬೆಂಕಿಯನ್ನು ಹತೋಟಿಗೆ ತರಲಾಗಿದೆ. "ಒಬ್ಬರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಜನರು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಮತ್ತು ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ನಾವು ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಸ್ಫೋಟಕ್ಕೆ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ, ವಾಹನದಲ್ಲಿ ತಂದ ಪಟಾಕಿಗಳನ್ನು ಇಳಿಸಿ ಗೋಡೌನ್‌ಗೆ ಸ್ಥಳಾಂತರಿಸುವಾಗ ಭಾರಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.