ನವದೆಹಲಿ:ಈ ಬಾರಿ ಬಿಜೆಪಿ ಅಬ್ ಕಿ ಬಾರ್ ಚಾರ್ ಸೌ ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವಿಚಾರ ಇಂದು ರಾಜ್ಯಸಭೆಯಲ್ಲಿ ಕುತೂಹಲಕಾರಿ ಚರ್ಚೆಗೆ ಕಾರಣವಾಯಿತು. ಬಿಜೆಪಿಯ ಘೋಷಣೆ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಅವರ ಈ ಮಾತನ್ನು ಕೇಳಿ ಸದನದಲ್ಲಿ ಹಾಜರಿದ್ದ ಪ್ರಧಾನಿ ನರೇಂದ್ರ ಮೋದಿ ಮೊಗದಲ್ಲಿ ನಗು ತರಿಸಿತು. ಈ ದೃಶ್ಯಗಳು ಈಗ ಸದ್ದು ಮಾಡುತ್ತಿದೆ.
ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದಾಗ ಈ ವಿಚಾರ ಪ್ರಸ್ತಾಪಿಸಿದ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಖರ್ಗೆ, "ಪ್ರಸ್ತುತ ಮೋದಿ ಸರ್ಕಾರ 330-334 ಸ್ಥಾನಗಳೊಂದಿಗೆ ಅಧಿಕಾರದಲ್ಲಿದೆ. ಈಗ ನಾವೆಲ್ಲ ಚುನಾವಣೆ ಹೊಸ್ತಿಲಿನಲ್ಲಿದ್ದು, ಬಿಜೆಪಿ ಈ ಬಾರಿ ಅಬ್ ಕಿ ಬಾರ್ ಚಾರ್ಸೌ ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸಲು ಹೊರಟಿದೆ. ಇಲ್ಲಿದ್ದವರೆಲ್ಲ ಮೊದಲು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲಿ, ಚಪ್ಪಾಳೆ ತಟ್ಟಿ ಪ್ರಧಾನಿ ಮೋದಿಯವರ ಕೃಪಾಶೀರ್ವಾದದಿಂದ ಇವರೆಲ್ಲ ಇಲ್ಲಿದ್ದಾರೆ ಎಂದರು. ಖರ್ಗೆ ಅವರ ಈ ಮಾತು ಸದನದಲ್ಲಿದ್ದ ಮೋದಿ ಅವರ ನಗುವಿಗೆ ಕಾರಣವಾಯ್ತು.
ಈ ಬಾರಿ ಮೋದಿ 100 ಸ್ಥಾನಗಳನ್ನೂ ಗೆಲ್ಲುವುದಿಲ್ಲ; ಖರ್ಗೆ:-ಈ ನಡುವೆ, ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಖರ್ಗೆ ಅವರ ಹೇಳಿಕೆಯನ್ನು ಶ್ಲಾಘಿಸಿದರು. ಖರ್ಗೆಯವರು ಸತ್ಯವನ್ನೇ ಮಾತನಾಡಿದ್ದಾರೆ ಎಂದರು. ಆದರೆ, ಅಚ್ಚರಿ ಎಂಬಂತೆ ತಮ್ಮ ಮೊದಲಿನ ಹೇಳಿಕೆಗೆ ವ್ಯತಿರಿಕ್ತವಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಸಹ ಮೀರುವುದಿಲ್ಲ ಎಂದು ಪ್ರತಿಪಾದಿಸಿದರು. ಏಕೆಂದರೆ ಇಂಡಿಯಾ ಮೈತ್ರಿಕೂಟ ಈ ಬಾರಿ ಬಲಿಷ್ಠವಾಗಿದೆ ಎಂದು ಹೇಳಿದರು.