ಇಂಫಾಲ್: ಮಹತ್ವದ ಬೆಳವಣಿಗೆಯೊಂದರಲ್ಲಿ ಗೃಹ ಸಚಿವಾಲಯ (ಎಂಎಚ್ಎ)ವು ಮಂಗಳವಾರ ನವದೆಹಲಿಯಲ್ಲಿ ಮೈಟಿ, ನಾಗಾ ಮತ್ತು ಕುಕಿ-ಝೋ ಸಮುದಾಯಗಳ ಶಾಸಕರ ಮಹತ್ವದ ಸಭೆ ಕರೆದಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ. ಮಣಿಪುರದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಜನಾಂಗೀಯ ಕಲಹಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತು ಶಾಂತಿ ಪುನಃಸ್ಥಾಪಿಸಲು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಮಂಗಳವಾರ ಸಭೆ ನಡೆಯುವ ವಿಚಾರವನ್ನು ಅಧಿಕಾರಿಗಳು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲವಾದರೂ ಮೈಟಿ, ನಾಗಾ ಮತ್ತು ಕುಕಿ-ಜೋ ಸಮುದಾಯಗಳ ಸಚಿವರು ಮತ್ತು ಶಾಸಕರು ಪ್ರತ್ಯೇಕವಾಗಿ ಸಭೆ ನಡೆಯಲಿದೆ ಎಂದು ದೃಢಪಡಿಸಿದ್ದಾರೆ.
ಮೈಟಿ ಮತ್ತು ನಾಗಾ ಸಮುದಾಯಗಳ ಕೆಲ ಸಚಿವರು ಮತ್ತು ಶಾಸಕರು ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಆದರೆ ಕುಕಿ-ಜೋ ಸಮುದಾಯಗಳಿಗೆ ಸೇರಿದ ಸಚಿವರು ಮತ್ತು ಶಾಸಕರು ಈ ಪ್ರಮುಖ ಸಭೆಯಲ್ಲಿ ಭಾಗವಹಿಸಲು ಇನ್ನೂ ನಿರ್ಧರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದ ಬಗ್ಗೆ ಚರ್ಚಿಸಲು ಮಂಗಳವಾರ ನವದೆಹಲಿಯಲ್ಲಿ ಸಭೆ ನಡೆಯಲಿದೆ ಎಂದು ಗೃಹ ಸಚಿವಾಲಯ ತಿಳಿಸಿರುವುದಾಗಿ ಕುಕಿ ಸಮುದಾಯಕ್ಕೆ ಸೇರಿದ ಕ್ಯಾಬಿನೆಟ್ ಸಚಿವ ಲೆಟ್ಪಾವೊ ಹಾವೊಕಿಪ್ ದೃಢಪಡಿಸಿದರು. "ನಾವು (ಕುಕಿ-ಜೋ ಶಾಸಕರು) ಮಂಗಳವಾರದ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ." ಎಂದು ಹಾವೊಕಿಪ್ ದೂರವಾಣಿಯಲ್ಲಿ ಐಎಎನ್ಎಸ್ಗೆ ತಿಳಿಸಿದರು.