ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ ಟಿಸಿ) ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ. ಗಣೇಶ ಹಬ್ಬಕ್ಕೆ ಇನ್ನೇನು ಮೂರ್ನಾಲ್ಕು ದಿನಗಳಿರುವಾಗ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ.
11 ದಿನಗಳ ಕಾಲ ನಡೆಯುವ ಗಣೇಶ ಹಬ್ಬಕ್ಕೆ ಮುನ್ನ ಎಂಎಸ್ಆರ್ಟಿಸಿ ನೌಕರರು ಮಂಗಳವಾರದಿಂದ ಅನಿರ್ದಿಷ್ಟ ಮುಷ್ಕರ ಪ್ರಾರಂಭಿಸಿದ್ದಾರೆ. ಮುಷ್ಕರದಿಂದಾಗಿ ರಾಜ್ಯಾದ್ಯಂತ ರಾಜ್ಯ ಸಾರಿಗೆ ಬಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅನಾನುಕೂಲತೆ ಉಂಟಾಗಿದೆ.
ಬುಧವಾರ ನೌಕರರ ಸಂಘಟನೆಯೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮುಷ್ಕರವನ್ನು ತಕ್ಷಣ ಹಿಂಪಡೆಯುವಂತೆ ಮಂಗಳವಾರ ಮನವಿ ಮಾಡಿದ್ದಾರೆ.
"ಸರ್ಕಾರ ನಾಳೆ ಸಭೆ ಕರೆದಿದೆ. ಎಂಎಸ್ಆರ್ಟಿಸಿ ನೌಕರರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಎಸ್ಟಿ ಬಸ್ಗಳು ಜನರ ದೈನಂದಿನ ಜೀವನದ ಜೀವನಾಡಿಯಾಗಿವೆ. ಗಣೇಶೋತ್ಸವ ಹತ್ತಿರದಲ್ಲಿದ್ದು, ಮುಷ್ಕರದಿಂದ ನಾಗರಿಕರಿಗೆ ತೊಂದರೆಯಾಗಲಿದೆ. ಸರ್ಕಾರವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಿದ್ದು, ನೌಕರರು ಮುಷ್ಕರ ಹಿಂಪಡೆಯಬೇಕು" ಎಂದು ಸಿಎಂ ಶಿಂಧೆ ಹೇಳಿದರು.
ಎಂಎಸ್ಆರ್ಟಿಸಿ ನೌಕರರ 11 ಕಾರ್ಮಿಕ ಸಂಘಗಳ ಕ್ರಿಯಾ ಸಮಿತಿಯು ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಿದೆ. ಮಂಗಳವಾರ ಬೆಳಗ್ಗೆ 8 ಗಂಟೆಯಿಂದ, ಒಟ್ಟು 251 ಡಿಪೋಗಳ ಪೈಕಿ 50 ಕ್ಕೂ ಹೆಚ್ಚು ಡಿಪೋಗಳಿಂದ ಬಸ್ ಸಂಚಾರ ಸ್ಥಗಿತವಾಗಿದೆ ಮತ್ತು ಇತರ ಕೆಲ ಡಿಪೋಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ.
ರಾಜ್ಯ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ನೀಡುವಂತೆ ಮುಷ್ಕರ ನಿರತ ನೌಕರರು ಒತ್ತಾಯಿಸುತ್ತಿದ್ದಾರೆ. ಖಾಸಗೀಕರಣವನ್ನು ವಿರೋಧಿಸುತ್ತಿರುವ ನೌಕರರು, ಸಂಸ್ಥೆಗೆ ರಾಜ್ಯ ಸರ್ಕಾರವೇ ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಿಎಂ ಶಿಂಧೆ ಅವರ ಮನವಿಯ ಹೊರತಾಗಿಯೂ ಎಂಎಸ್ಆರ್ಟಿಸಿ ನೌಕರರು ತಮ್ಮ ಮುಷ್ಕರವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಟ್ರೇಡ್ ಯೂನಿಯನ್ ಮೂಲಗಳ ಪ್ರಕಾರ, ಮರಾಠವಾಡಾದ ಲಾತೂರ್ ಮತ್ತು ನಾಂದೇಡ್ ವಿಭಾಗಗಳಲ್ಲಿ ಬಹುತೇಕ ಎಂಎಸ್ಆರ್ಟಿಸಿ ಡಿಪೋಗಳನ್ನು ಮುಚ್ಚಲಾಗಿದೆ. ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಸೋಲಾಪುರ ವಿಭಾಗಗಳಲ್ಲಿ ಸಂಚಾರ ಸುಗಮವಾಗಿ ನಡೆಯುತ್ತಿದೆ. ಪುಣೆ ಜಿಲ್ಲೆಯ ಶಿವಾಜಿನಗರ, ವಲ್ಲಭನಗರ, ಭೋರ್, ಸಾಸ್ವಾಡ್, ಬಾರಾಮತಿ ಮತ್ತು ತಳೇಂಗಾಂವ್ನ ಡಿಪೋಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಹಾಗೆಯೇ ಮಿರಜ್, ಜತ್ ಮತ್ತು ಪಲುಸ್ ಸೇರಿದಂತೆ ಸಾಂಗ್ಲಿ ಜಿಲ್ಲೆಯ ಡಿಪೋಗಳು ಮುಚ್ಚಲ್ಪಟ್ಟಿವೆ.
ಇದನ್ನೂ ಓದಿ : ಲಾಡ್ಕಿ ಬಹಿಣ್ ಯೋಜನೆಯಡಿ ನೋಂದಣಿ ಸೆಪ್ಟೆಂಬರ್ನಲ್ಲೂ ಮುಂದುವರಿಕೆ: ಸಚಿವೆ ಅದಿತಿ ತಟ್ಕರೆ - Ladki Bahin Scheme