ಮುಂಬೈ (ಮಹಾರಾಷ್ಟ್ರ):ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಅವರ ನಿರಶನಕ್ಕೆ ದೊಡ್ಡ ಜಯ ಸಿಕ್ಕಿದೆ. ಮರಾಠರಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಮಹಾರಾಷ್ಟ್ರ ಸರ್ಕಾರ ಅಧಿವೇಶನದಲ್ಲಿ ಮಂಗಳವಾರ ಮಂಡನೆ ಮಾಡಿ ಅಂಗೀಕರಿಸಿತು.
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮೈತ್ರಿ ಸರ್ಕಾರ ಮಂಗಳವಾರ ಅಂಗೀಕರಿಸಿದ ಶೇಕಡಾ 10ರಷ್ಟು ಮರಾಠ ಮೀಸಲು ನೀಡುವ ಮಸೂದೆಯು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ಸರ್ಕಾರ ಪರಿಚಯಿಸಿದ್ದ ವಿಧೇಯಕವನ್ನೇ ಮುಂದುವರಿಸಲಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಕಾಯ್ದೆ 2018 ರಂತೆಯೇ ಇದೆ. ಈ ಮೂಲಕ ದಶಕದಲ್ಲಿ ಮೂರನೇ ಬಾರಿಗೆ ಮರಾಠ ಮೀಸಲು ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು
ಮರಾಠ ಸಮುದಾಯಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲು ನೀಡಬೇಕು ಎಂದು ಕಾರ್ಯಕರ್ತ ಮನೋಜ್ ಜಾರಂಗೆ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದು ಸರ್ಕಾರದ ಮೇಲೆ ಒತ್ತಡ ಉಂಟು ಮಾಡಿ ಮಸೂದೆ ಮಂಡಿಸಿ ಅಂಗೀಕರಿಸುವಂತೆ ಮಾಡಿದೆ.
ಉದ್ಯೋಗ, ಶಿಕ್ಷಣದಲ್ಲಿ ಮೀಸಲು:ನಿವೃತ್ತ ನ್ಯಾಯಮೂರ್ತಿ ಸುನಿಲ್ ಶುಕ್ರೆ ಅವರ ನೇತೃತ್ವದ ಮಹಾರಾಷ್ಟ್ರ ಹಿಂದುಳಿದ ವರ್ಗ ಆಯೋಗವು (ಎಂಬಿಸಿಸಿ) ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯ ಅನುಸಾರ ಮೀಸಲಾತಿ ವಿಸ್ತರಿಸಲಾಗಿದೆ. ರಾಜ್ಯವು ಈಗಾಗಲೇ ಆರ್ಥಿಕವಾಗಿ ದುರ್ಬಲ ವರ್ಗವಿರುವ (ಇಡಬ್ಲ್ಯೂಎಸ್) ಸಮುದಾಯಗಳಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡಲಾಗಿದೆ. ಇದರಲ್ಲಿ ಮರಾಠರು ಹೆಚ್ಚಿನ ಶೇಕಡಾ 85 ರಷ್ಟು ಮೀಸಲಾತಿಯ ಫಲಾನುಭವಿಗಳಾಗಿದ್ದಾರೆ.