ಪ್ರಯಾಗ್‌ರಾಜ್ (ಉತ್ತರ ಪ್ರದೇಶ) :ಇಲ್ಲಿ ನಡೆಯುತ್ತಿರುವ ಸನಾತನಿಗಳ ಮಹಾ ಕುಂಭಮೇಳದ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಪವಿತ್ರ ಸ್ನಾನ ಮಾಡಿದರು. ಬಳಿಕ ಕುಟುಂಬದೊಂದಿಗೆ ಆರತಿ ಬೆಳಗಿದರು.
12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವು ಗಣ್ಯರು ಮಿಂದೆದ್ದಿದ್ದಾರೆ.
ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಬಂದ ಅಮಿತ್ ಶಾ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರ ಮಾಡಿಕೊಂಡರು. ಬಳಿಕ ಪ್ರಯಾಗ್ರಾಜ್ನ ಮಹಾಕುಂಭ ನಗರಕ್ಕೆ ತೆರಳಿ ಅಲ್ಲಿನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಈ ವೇಳೆ ಪತಂಜಲಿಯ ಬಾಬಾ ರಾಮ್ದೇವ್ ಸೇರಿದಂತೆ ಸಂತರು ಮತ್ತು ಋಷಿಗಳು ಜೊತೆಗಿದ್ದರು.
ಸಂತರೊಂದಿಗೆ ಶಾ ಮಾತುಕತೆ:ಪುಣ್ಯ ಸ್ನಾನಕ್ಕೂ ಮಾಡುವ ಮೊದಲು, ಅಮಿತ್ ಶಾ ಮತ್ತು ಸಿಎಂ ಯೋಗಿ ಅವರು ಪ್ರಯಾಗ್‌ರಾಜ್‌ನಲ್ಲಿರುವ ಸಂತರು ಮತ್ತು ಋಷಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ, ಕೇಂದ್ರ ಸಚಿವರು ಬಡೇ ಹನುಮಾನ್ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಿದರು. ನಂತರ, ಶಾ ಜುನಾ ಅಖಾಡಕ್ಕೆ ತೆರಳಲಿದರು. ಅಲ್ಲಿ ಅವರು ಮಹಾರಾಜರು ಮತ್ತು ಅಖಾಡದ ಸಂತರೊಂದಿಗೆ ಭೋಜನ ಸವಿದರು.