ಮಹಾಕುಂಭ ನಗರ(ಉತ್ತರ ಪ್ರದೇಶ):ಇಲ್ಲಿನ ಪ್ರಯಾಗ್ರಾಜ್ನಲ್ಲಿ ಜನವರಿ 13ರಿಂದ ಆರಂಭವಾಗಿರುವ ಮಹಾ ಕುಂಭಮೇಳದಲ್ಲಿ ಕೇವಲ 30 ದಿನದಲ್ಲಿ 45 ಕೋಟಿಗೂ ಅಧಿಕ ಜನರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ತಿಳಿಸಿದೆ.
ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಮಹಾ ಕುಂಭ ಮೇಳವು ಫೆಬ್ರವರಿ 26ರವರೆಗೂ ನಡೆಯಲಿದೆ. ಅಂದು ಮಹಾಶಿವರಾತ್ರಿ ಇದೆ. ಅಂದಿನ ಕೊನೆಯ ಅಮೃತ ಸ್ನಾನದ ಮೂಲಕ ಭಕ್ತಿ, ಸಂಸ್ಕೃತಿಯ ಮೇಳ ಸಂಪನ್ನವಾಗಲಿದೆ ಎಂದಿದೆ.
ಮಕರ ಸಂಕ್ರಾಂತಿ, ಮೌನಿ ಅಮಾವಾಸ್ಯೆ ಮತ್ತು ವಸಂತ ಪಂಚಮಿಯ ಮೂರು ಅಮೃತ ಸ್ನಾನಗಳ ನಂತರವೂ, ಪ್ರಯಾಗ್ರಾಜ್ಗೆ ಆಗಮಿಸುವ ಭಕ್ತರ ಸಂಖ್ಯೆ ಕುಗ್ಗಿಲ್ಲ. ಇಂದು (ಮಂಗಳವಾರ) ಬೆಳಿಗ್ಗೆ 10 ಗಂಟೆಯ ಹೊತ್ತಿಗೆ 74.96 ಲಕ್ಷ ಜನರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯಾವಾಗ, ಎಷ್ಟು ಜನರಿಂದ ಸ್ನಾನ?:ಈಗಾಗಲೇ ಮುಗಿದ ಮೂರು ಅಮೃತ ಸ್ನಾನಗಳಲ್ಲಿ ಮೌನಿ ಅಮಾಸ್ಯೆಯಂದು ಅತ್ಯಧಿಕ ಪ್ರಮಾಣದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಅಂದು 8 ಕೋಟಿ ಭಕ್ತಾದಿಗಳು ಆಗಮಿಸಿದ್ದರು. ಮಕರ ಸಂಕ್ರಾಂತಿಯಂದು 3.5 ಕೋಟಿ, ವಸಂತ ಪಂಚಮಿಯಂದು 2.57 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಪವಿತ್ರ ಸ್ನಾನ ಮಾಡಿದ ಗಣ್ಯರು: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಮುಖ ರಾಜಕೀಯ ನಾಯಕರಾಗಿದ್ದಾರೆ. ನಟರಾದ ಅನುಪಮ್ ಖೇರ್, ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್, ಕ್ರಿಕೆಟಿಗ ಸುರೇಶ್ ರೈನಾ ಮತ್ತು ಕುಸ್ತಿಪಟು ಗ್ರೇಟ್ ಕಲಿ ಮಹಾ ಕುಂಭದಲ್ಲಿ ಭಾಗವಹಿಸಿದ ಇತರೆ ಪ್ರಮುಖರು.
55 ಕೋಟಿ ದಾಟುವ ನಿರೀಕ್ಷೆ:45 ದಿನಗಳ ಮಹಾ ಕುಂಭಮೇಳಕ್ಕೆ ಇನ್ನೂ 15 ದಿನ ಬಾಕಿ ಇದೆ. ಈಗಾಗಲೇ 45 ಕೋಟಿ ಭಕ್ತರು ಪವಿತ್ರ ಸ್ನಾನದಲ್ಲಿ ಭಾಗಿಯಾಗಿದ್ದು, ಮುಗಿಯುವ ವೇಳೆಗೆ ಇದು 55 ಕೋಟಿ ದಾಟುವ ನಿರೀಕ್ಷೆ ಇದೆ ಎಂದು ಸರ್ಕಾರ ಅಂದಾಜಿಸಿದೆ.
ಮಹಾ ಕುಂಭದ ಅಂತ್ಯದ ವೇಳೆಗೆ ಸುಮಾರು 55 ಕೋಟಿಗೂ ಅಧಿಕ ಜನರು ಪ್ರಯಾಗರಾಜ್‌ಗೆ ಭೇಟಿ ನೀಡುವ ಸಾಧ್ಯತೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ರಾಜ್ಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಇಷ್ಟು ಪ್ರಮಾಣದಲ್ಲಿ ಜನರು ಭೇಟಿ ನೀಡಿದ್ದೇ ಆದಲ್ಲಿ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟು ಜನ ಒಂದೇ ಸ್ಥಳಕ್ಕೆ ಭೇಟಿ ನೀಡಿದ ದಾಖಲೆ ಸೃಷ್ಟಿಯಾಗಲಿದೆ.
ಇದನ್ನೂ ಓದಿ:ಕುಂಭ, ಗಂಗಾ, ಜಮುನಾ, ಬಸಂತಿ: ಮಹಾ ಕುಂಭಮೇಳದಲ್ಲಿ ಜನಿಸಿದ ಶಿಶುಗಳಿಗೆ ನಾಮಕರಣ
ಮಹಾ ಕುಂಭಮೇಳ: ಇದುವರೆಗೆ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ 40 ಕೋಟಿ! ಫೋಟೋಗಳಲ್ಲಿ ನೋಡಿ ವೈಭವ