ಮಧುರೈ (ತಮಿಳುನಾಡು): ತಮಿಳುನಾಡಿನಿಂದ ಬಂದ ವ್ಯಕ್ತಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾನೆ ಎಂಬ ಹೇಳಿಕೆ ಸಂಬಂಧ ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ವಿರುದ್ಧ ಮಧುರೈ ಸಿಟಿ ಸೈಬರ್ ಕ್ರೈಂ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿರುವಾಗಲೇ ಶೋಭಾ ಕರಂದ್ಲಾಜೆ ಮಾರ್ಚ್ 19ರಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ, ತಮಿಳುನಾಡಿನಿಂದ ವ್ಯಕ್ತಿಯೊಬ್ಬ ತರಬೇತಿ ಪಡೆದು ಕೆಫೆಯಲ್ಲಿ ಬಾಂಬ್ ಇಟ್ಟಿದ್ದಾನೆ ಎಂದು ಆರೋಪಿಸಿದ್ದರು. ಅಲ್ಲದೇ, ಇನ್ನೋರ್ವ ದೆಹಲಿಯಿಂದ ಬಂದು ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದಾನೆ. ಮತ್ತೋರ್ವ ಕೇರಳದಿಂದ ಬಂದು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ ಎಂದು ಹೇಳಿಕೆ ನೀಡಿದ್ದರು.
ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ತಮಿಳುನಾಡು ನಂಟಿನ ಆರೋಪ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ, ತಮಿಳುನಾಡು ಸಿಎಂ ಸ್ಟಾಲಿನ್ ಸೇರಿ ಅನೇಕ ರಾಜಕೀಯ ನಾಯಕರಿಂದ ವಿರೋಧ, ಖಂಡನೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಶೋಭಾ ಕರಂದ್ಲಾಜೆ ಈಗಾಗಲೇ ತಮಿಳುನಾಡು ಜನತೆಯ ಕ್ಷಮೆ ಕೋರಿದ್ದಾರೆ. 'ನನ್ನ ತಮಿಳು ಸಹೋದರ ಹಾಗೂ ಸಹೋದರಿಯರೇ, ನಾನು ಈ ಘಟನೆ ಬಗ್ಗೆ ಬೆಳಕು ಚೆಲ್ಲಲು ಈ ರೀತಿ ಹೇಳಿಕೆ ನೀಡಿದ್ದೇನೆಯೇ ಹೊರತು, ಬೇರೆ ಯಾವುದೇ ನೆರಳು ಹರಡಿಲ್ಲ. ಆದರೂ ನನ್ನ ಟೀಕೆಗಳಿಂದ ಕೆಲವರಿಗೆ ನೋವು ಉಂಟಾಗಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರನ್ನು ಉದ್ದೇಶಿಸಿ ನಾನು ಮಾತನಾಡಿದ್ದೇನೆ' ಎಂದು ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.