ಏಲೂರು, ಭೀಮಾವರಂ:ಪ್ರೀತಿ ಎಂಬುದು ಕೇವಲ ಒಡನಾಟವಲ್ಲ. ಇದು ಪ್ರಗತಿ ಮತ್ತು ಬದಲಾವಣೆಗೆ ರಹದಾರಿ. ಪ್ರೀತಿಯಲ್ಲಿ ಬಿದ್ದ ಜೋಡಿಗಳು ಜಗದ ಕಟ್ಟಳೆಗಳನ್ನು ಮೀರಿ ಸವಾಲುಗಳಿಗೆ ಎದೆಯೊಡ್ಡಿ ಸಾಹಸಕ್ಕೆ ಮುಂದಾಗುತ್ತಾರೆ. ಕೈ ಕೈ ಹಿಡಿದು ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿಯೂ ಶಹಬ್ಬಾಸ್ಗಿರಿ ಪಡೆಯುತ್ತಾರೆ. ಪ್ರೀತಿಯಲ್ಲಿರುವ ಪರಸ್ಪರ ಪ್ರೋತ್ಸಾಹ, ಆಕರ್ಷಣೆ ಮತ್ತು ತ್ಯಾಗಗಳೇ ಈ ರೀತಿಯ ಯಶಸ್ಸಿಗೆ ಒಮ್ಮೊಮ್ಮೆ ಅಡಿಪಾಯವನ್ನೂ ಹಾಕಿ ಬಿಡುತ್ತವೆ. ಈ ರೀತಿ ಪ್ರೀತಿಯಲ್ಲಿ ವೈಯಕ್ತಿಕ ಬದುಕು ಹಸನಾಗಿಸುವ ಜೊತೆಗೆ ಸಮುದಾಯಕ್ಕೆ ಸೇವೆ ಸಲ್ಲಿಸಿದ ಜೋಡಿಗಳು ನಮ್ಮ ನಡುವೆ ಮಾದರಿಯಾಗಿದ್ದಾರೆ.
ಕಠಿಣ ಶ್ರಮದ ಪ್ರೀತಿ: ಏಲೂರು ಜಿಲ್ಲೆಯ ಜಿಲ್ಲಾ ನಾಗರಿಕ ಪೂರೈಕೆ ಕಾರ್ಪೊರೇಷನ್ ಮ್ಯಾನೇಜರ್ ಶ್ರೀಲಕ್ಷ್ಮಿ ಮತ್ತು ಅವರ ಪತಿ ರವಿ ಕುಮಾರ್ ಪ್ರೀತಿಯ ಪ್ರಯಣ ಎಲ್ಲರ ಗಮನ ಸೆಳೆಯುವಂತದ್ದು. ಪರಸ್ಪರ ಪ್ರೀತಿ, ಸಹನಶೀಲತೆಯನ್ನೇ ಮಂತ್ರವಾಗಿಸಿಕೊಂಡಿರುವ ಇವರ ಪ್ರೀತಿ ಅರಳಿದ್ದು, ಎಂಎಸ್ಸಿ ಅಧ್ಯಯನದ ವೇಳೆ. ಅತ್ಯಂತ ಕಷ್ಟದ ಸಮಯದಲ್ಲಿ ಹಸೆಮಣೆ ಏರಿದ ಇವರಿಗೆ ಆರ್ಥಿಕ ಸಂಕಷ್ಟ ಬಂದೊದಗಿತು. ಈ ವೇಳೆ, ತ್ಯಾಗಕ್ಕೆ ಸಿದ್ದರಾಗಿದ್ದು ರವಿಕುಮಾರ್. ಓದನ್ನು ಅರ್ಧಕ್ಕೆ ನಿಲ್ಲಿಸಿ, ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಮುಂದಾದ ರವಿ ಕುಮಾರ್ ಹೆಂಡತಿಯ ಓದಿಗೆ ಅಡ್ಡಿಯಾಗಲಿಲ್ಲ, ಬದಲಾಗಿ ಆಕೆಗೆ ಆಸರೆಯಾಗಿ ನಿಂತು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಿದರು.
ತಮ್ಮ ಸಾಧನೆಯಲ್ಲಿ ಪತಿಯ ನೆರಳು ಇದೆ ಎನ್ನುವ ಶ್ರೀಲಕ್ಷ್ಮಿ, ನನ್ನ ಭವಿಷ್ಯಕ್ಕಾಗಿ ಅವರು ತ್ಯಾಗ ಮಾಡಿದರು. ತಾಂತ್ರಿಕತೆಯ ಅಪಾರ ಜ್ಞಾನ ಹೊಂದಿದ್ದ ರವಿ ಕುಮಾರ್, ನನಗೆ ಮಾತ್ರವಲ್ಲ, ನನ್ನ ಉದ್ಯೋಗದಲ್ಲಿ ಎದುರಿಸಿದ ಸವಾಲಿಗೆ ಬೆನ್ನೆಲುಬಾಗಿ ನಿಂತರು. ನಮ್ಮ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತರು. ನಾನು ಇಂದು ಈ ಮಟ್ಟಕ್ಕೆ ತಲುಪಲು ಕಾರಣ ನಮ್ಮ ನಡುವಿನ ಪ್ರೀತಿ ಎನ್ನುತ್ತಾರೆ ಶ್ರೀಲಕ್ಷ್ಮಿ.
ಯಶಸ್ಸಿಗೆ ಮೆಟ್ಟಿಲು: ಏಲೂರು ಜಿಲ್ಲೆಯ ಮತ್ತೊಂದು ಪ್ರೇರಣಾದಾಯಕ ಕಥೆ ಹೆಚ್ಚುವರಿ ಜಿಲ್ಲಾಧಿಕಾರಿ ಧಾತ್ರಿ ರೆಡ್ಡಿ ಮತ್ತು ಎಸ್ಪಿ ಪ್ರತಾಪ್ ಶಿವಕಿಶೋರ್. ಐಐಟಿ - ಖರಗ್ಪುರ್ದಲ್ಲಿ ಓದಿದ ಇಬ್ಬರು ಕೈ ತುಂಬಾ ಸಂಬಳದ ಉದ್ಯೋಗ ಬಿಟ್ಟು, ನಾಗರಿಕ ಸೇವೆ ಸೇರಿ ಜನ ಸೇವೆ ಮಾಡುವ ಗುರಿ ಹೊಂದಿದರು. ತರಬೇತಿ ವೇಳೆ ಚಿಗುರಿದ ಪ್ರೀತಿಗೆ ಕುಟುಂಬದ ಆಶೀರ್ವಾದವೂ ಸಿಕ್ಕಿ, ವಿವಾಹವಾದರು. ಪರಸ್ಪರ ಪ್ರೋತ್ಸಾಹದ ಪರಿಣಾಮವಾಗಿ, ಧಾತ್ರಿ ರೆಡ್ಡಿ ಮದುವೆ ಬಳಿಕ ಐಎಎಸ್ನಲ್ಲಿ ಸ್ಥಾನ ಪಡೆದರು.
ಇದಕ್ಕೆ ಮೊದಲು ಅವರು ಅಲ್ಲೂರಿ ಜಿಲ್ಲೆಯಲ್ಲಿ ಎಎಸ್ಪಿ ಮತ್ತು ಉಪ ಜಿಲ್ಲಾಧಿಕಾರಿಯಾ ಸೇವೆ ಸಲ್ಲಿಸುತ್ತಿದ್ದರು. ಈ ಜೋಡಿ ಪಿಡಿ ರೈಸ್ ರಾಕೆಟ್ ವಿರುದ್ಧ ಹೋರಾಡಿ ಹೆಸರು ಗಳಿಸಿದ್ದಾರೆ. ಬಾಲ್ಯ ವಿವಾಹ ತಡೆಗೆ ಚಿಟ್ಟಿ ಕಾರ್ಯಕ್ರಮವನ್ನು ಚಾಲನೆಗೆ ತಂದು ಸಮಾಜ ಬದಲಾವಣೆಗೆ ಮುನ್ನುಡಿ ಬರೆದರು. ಧಾತ್ರಿ ಮಹಿಳಾ ಸುರಕ್ಷತೆಯ ಅಭಯ ಕಾರ್ಯಕ್ರಮಕ್ಕೆ ಹೆಸರು ಮತ್ತು ಲೋಗೋ ವಿನ್ಯಾಸ ಮಾಡಿ ಗಮನ ಸೆಳೆದಿದ್ದಾರೆ.
ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಯೋಜನೆಗಳನ್ನು ಅರ್ಥಪೂರ್ಣವಾಗಿ ಜಾರಿ ಮಾಡಲು ಸಾಧ್ಯವಾಗುತ್ತಿದೆ. ನಾವು ದೆಡ್ಲುರು ಗ್ರಾಮವನ್ನು ದತ್ತು ಪಡೆಯುವ ಯೋಜನೆ ಹೊಂದಿದ್ದು, ನಮ್ಮ ಪ್ರಗತಿಗೆ ಪ್ರೀತಿಯೇ ಕಾರಣ ಎನ್ನುತ್ತಿದೆ ಈ ಜೋಡಿ.