ಅಮೆರಿಕ ಚುನಾವಣೆಯಲ್ಲಿ ಐತಿಹಾಸಿಕ ವಿಜಯ: ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಅಭಿನಂದನೆ - NARENDRA MODI CONGRATULATES TRUMP
ಭಾರತ- ಅಮೆರಿಕ ಸಮಗ್ರ ಜಾಗತಿಕ ಮತ್ತು ಪರಸ್ಪರ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಮ್ಮ ಸಹಯೋಗವನ್ನು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.
ಅಮೆರಿಕ ಚುನಾವಣೆಯಲ್ಲಿ ಐತಿಹಾಸಿಕ ವಿಜಯ: ಡೊನಾಲ್ಡ್ ಟ್ರಂಪ್‌ಗೆ ಪ್ರಧಾನಿ ಮೋದಿ ಅಭಿನಂದನೆ (X@narendramodi)
ನವದೆಹಲಿ: 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿನ ಹೊಸ್ತಿಲಿನಲ್ಲಿ ಇದ್ದಾರೆ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿನಂದನೆ ಸಲ್ಲಿಸಿದ್ದಾರೆ.
"ನಿಮ್ಮ ಐತಿಹಾಸಿಕ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ, @realDonaldTrump ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು‘‘. ನಿಮ್ಮ ಹಿಂದಿನ ಅವಧಿಯಲ್ಲಿ ಭಾರತ - ಅಮೆರಿಕ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಗಟ್ಟಿಯಾದ ಪಾಲುದಾರಿಕೆಯನ್ನು ಹೊಂದಿತ್ತು. ಇದು ಇನ್ನಷ್ಟು ಬಲಪಡಿಸಲು ನಮ್ಮ ಸಹಯೋಗವನ್ನು ನವೀಕರಿಸಲು ನಾನು ಎದುರು ನೋಡುತ್ತಿದ್ದೇನೆ. ಒಟ್ಟಾಗಿ ಕೆಲಸ ಮಾಡೋಣ, ನಮ್ಮ ಜನರ ಜೀವನ ಮಟ್ಟ ಸುಧಾರಣೆ ಮತ್ತು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಉಭಯ ರಾಷ್ಟ್ರಗಳ ನಡುವ ಸಂಬಂಧ ವೃದ್ಧಿ ತೀರಾ ಅಗತ್ಯ ಎಂದು ತಮ್ಮ ಅಧಿಕೃತ X ಹ್ಯಾಂಡಲ್ನಲ್ಲಿ ಪ್ರಧಾನಿ ಪೋಸ್ಟ್ ಮಾಡಿದ್ದಾರೆ. ಟ್ರಂಪ್ ಅವರನ್ನು ಅಭಿನಂದಿಸಿದ ಮೊದಲ ವಿಶ್ವ ನಾಯಕರಲ್ಲಿ ಮೋದಿ ಒಬ್ಬರು ಎಂಬುದು ಗಮನಾರ್ಹ.
ಅಸೋಸಿಯೇಟೆಡ್ ಪ್ರೆಸ್‌ನ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, ಶ್ವೇತಭವನವನ್ನು ಪ್ರವೇಶಿಸಲು 270 ಮತಗಳು ಅಗತ್ಯ ಇದೆ. ಟ್ರಂಪ್ ಈಗಾಗಲೇ 267 ಎಲೆಕ್ಟರೋಲ್ ಮತ ಪಡೆದುಕೊಂಡಿದ್ದಾರೆ. ಮ್ಯಾಜಿಕ್ ನಂಬರ್ ದಾಟಲು ಮೂರು ಮತಗಳ ಅಗತ್ಯವಿದೆ. ಅಲಾಸ್ಕಾ, ಮಿಚಿಗನ್, ವಿಸ್ಕಾನ್ಸಿನ್, ಅರಿಜೋನಾ ಅಥವಾ ನೆವಾಡಾಗಳಲ್ಲಿನ ಅಂತಿಮ ಫಲಿತಾಂಶ ಮಾಜಿ ಅಧ್ಯಕ್ಷರನ್ನು ಹಾಲಿ ಅಧ್ಯಕ್ಷರನ್ನಾಗಿಸಲಿದೆ.
ನಮ್ಮ ಸಂಬಂಧ ಗಟ್ಟಿ ಎಂದ ವಿದೇಶಾಂಗ ಸಚಿವ ಜೈ ಶಂಕರ್:ಇದಕ್ಕೂ ಮೊದಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾತನಾಡಿದ್ದರು. ಕಳೆದ ಐದು ಅಧ್ಯಕ್ಷರ ಅವಧಿಗಳಲ್ಲಿ ಭಾರತವು ಅಮೆರಿಕದೊಂದಿಗಿನ ತನ್ನ ಬಾಂಧವ್ಯದಲ್ಲಿ ಸ್ಥಿರವಾದ ಪ್ರಗತಿಯನ್ನು ಕಂಡಿದೆ ಮತ್ತು ಅಮೆರಿಕ ಚುನಾವಣೆಯ ಫಲಿತಾಂಶವನ್ನು ಲೆಕ್ಕಿಸದೇ ಅಮೆರಿಕದೊಂದಿಗಿನ ನಮ್ಮ ಸಂಬಂಧವು ಮುಂದುವರೆಯಲಿದೆ ಎಂದು ಹೇಳಿದ್ದರು.
ಆಸ್ಟ್ರೇಲಿಯಾದ ಸಹವರ್ತಿ ಪೆನ್ನಿ ವಾಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಜೈಶಂಕರ್, ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ಗಳನ್ನು ಒಳಗೊಂಡಿರುವ ಕ್ವಾಡ್‌ನ ಭವಿಷ್ಯದ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದರು.