ಹೈದರಾಬಾದ್:ದೇಶದಲ್ಲಿ ಲೋಕಸಮರದ ಕಾವು ಜೋರಾಗಿದ್ದು ಇಂದುಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗೊಂಡಿದೆ. ಜೂನ್ 1 ರಂದು ಬಿಡುಗಡೆಯಾದ ಸಮೀಕ್ಷೆಯ ಪ್ರಕಾರ ಬಿಜೆಪಿ ಸರ್ಕಾರ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ. ಎಕ್ಸಿಟ್ ಪೋಲ್‌ಗಳ ಸಮೀಕ್ಷೆ ಪ್ರಕಾರ, ಮೂರನೇ ಬಾರಿಗೆ ಪಿಎಂ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಬಹುದು ಮತ್ತು ಬಿಜೆಪಿ ಮೈತ್ರಿಕೂಟ 300 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ಎಕ್ಸಿಟ್ಪೋಲ್ಗಳ ಭವಿಷ್ಯ ನಿಜವಾದದ್ದೇ ಆದರೆ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗುವ ಮೂಲಕ ನೆಹರೂ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ದಾಖಲೆ ಹೊಸ್ತಿಲಲ್ಲಿ ಮೋದಿ?:ಪ್ರಧಾನಿ ಮೋದಿ ನೇತೃತ್ವದಲ್ಲಿ, ಎನ್‌ಡಿಎ 2014 ಮತ್ತು 2019ನೇ ಲೋಕಸಭೆ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿತ್ತು. 2014ರಲ್ಲಿ ಬಿಜೆಪಿ ಏಕಾಂಗಿಯಾಗಿ 280ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಬಳಿಕ 2019ರಲ್ಲೂ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಇದೀಗ ಮೂರನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್ಗಳು ತಿಳಿಸಿವೆ. ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿದ್ದೇ ಆದಲ್ಲಿ ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರು ಅವರ ದಾಖಲೆ ಸರಿಗಟ್ಟಲಿದ್ದಾರೆ. ಸತತ ಮೂರು ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಎರಡನೇ ಪ್ರಧಾನಿ ಎಂಬ ದಾಖಲೆಯನ್ನು ಬರೆಯಲಿದ್ದಾರೆ.