ಲಖನೌ, ಉತ್ತರಪ್ರದೇಶ:ಲೋಕಸಭೆ ಚುನಾವಣೆ 2024 ರ ಎಲ್ಲ ಹಂತಗಳ ಮತದಾನ ಇದೀಗ ಪೂರ್ಣಗೊಂಡಿದೆ. ಜೂನ್ 4 ರಂದು ಫಲಿತಾಂಶ ಪ್ರಕಟಿಸುವ ಮುನ್ನ ವಿವಿಧ ಏಜೆನ್ಸಿಗಳಿಂದ ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬಂದಿವೆ. ಸರ್ಕಾರಗಳ ಹಣೆಬರಹ ಬರೆಯುವ ಪ್ರಮುಖ ರಾಜ್ಯ ಉತ್ತರಪ್ರದೇಶದಲ್ಲಿ ಈ ಬಾರಿಯೂ ಬಿಜೆಪಿ ಮತ್ತೊಮ್ಮೆ ಬಾರೀ ಮುನ್ನಡೆ ಗಳಿಸಿದೆ. ಅದರಲ್ಲೂ ರಾಜ್ಯದ ಪಶ್ಚಿಮ ಭಾಗದಲ್ಲಿ ಎಸ್‌ಪಿ-ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಲಕ್ಷಣ ಕಾಣುತ್ತಿದೆ.
ದಕ್ಷಿಣ ಭಾರತದ ರಾಜ್ಯಗಳ ಅಂಕಿ - ಅಂಶಗಳ ಬಗ್ಗೆ ಮಾತನಾಡುವುದಾದರೆ, ಎಕ್ಸಿಟ್ ಪೋಲ್ ಪ್ರಕಾರ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿಗೆ ಒಳ್ಳೆಯ ಸುದ್ದಿ ಇದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ, ಬಿಹಾರದಲ್ಲಿ ಎನ್‌ಡಿಎಗೆ ನಷ್ಟವನ್ನು ಅಂದಾಜಿಸಲಾಗಿದೆ.
ಮಧ್ಯಪ್ರದೇಶ- ಛತ್ತೀಸ್‌ಗಢದಲ್ಲಿ ಕ್ಲೀನ್ಸ್ವೀಪ್ ಭವಿಷ್ಯ:ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್ ಮಾಡುವ ಸೂಚನೆಗಳಿವೆ. ಅಂದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 29 ರಲ್ಲಿ 29 ಸ್ಥಾನಗಳನ್ನು ಗೆಲ್ಲುವ ಸೂಚನೆಗಳಿವೆ. ಅದೇ ರೀತಿ ಛತ್ತೀಸ್‌ಗಢದ 11 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆಲ್ಲಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಅದೇ ಸಮಯದಲ್ಲಿ, ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಎನ್‌ಡಿಎಗೆ ದೊಡ್ಡ ನಷ್ಟದ ಸೂಚನೆಗಳಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ 25 ಸ್ಥಾನಗಳಲ್ಲಿ 25 ಸ್ಥಾನಗಳನ್ನು ವಶಪಡಿಸಿಕೊಂಡಿತ್ತು. ಆದರೆ, ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿ ಮತ್ತು ಎನ್‌ಡಿಎ 6 ರಿಂದ 7 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟ ನೇರ ಲಾಭ ಪಡೆಯುತ್ತಿದೆ.
ಪಶ್ಚಿಮ ಉತ್ತರಪ್ರದೇಶದಲ್ಲಿ ಎನ್‌ಡಿಎ ಪ್ರಾಬಲ್ಯದ ಅಂದಾಜು:ಉತ್ತರಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ ನಡೆದಿದೆ. ಏಪ್ರಿಲ್ 19 ರಂದು ಆರಂಭವಾಗಿ ಇಂದು ಅಂದರೆ ಜೂನ್ 1 ರಂದು ಸಂಪೂರ್ಣ ಕ್ಷೇತ್ರಗಳಿಗೆ ಮತದಾನ ಮುಗಿದಿದೆ. ಏಜೆನ್ಸಿಯೊಂದು ಯುಪಿಯ 3 ಹಂತಗಳ ಅಂದಾಜನ್ನು ನೀಡಿದೆ. ಯುಪಿಯಲ್ಲಿ ಮೊದಲ 3 ಹಂತಗಳಲ್ಲಿ 26 ಸ್ಥಾನಗಳಿಗೆ ಮತದಾನ ನಡೆದಿದೆ. ಈ ಎಲ್ಲಾ ಸ್ಥಾನಗಳು ಪಶ್ಚಿಮ ಯುಪಿಯಿಂದಲೇ ಬಂದಿವೆ. ಎಕ್ಸಿಟ್ ಪೋಲ್ ಪ್ರಕಾರ, ಈ 26ರಲ್ಲಿ ಬಿಜೆಪಿಯ ಎನ್‌ಡಿಎ 22 - 25 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಎಸ್‌ಪಿ - ಕಾಂಗ್ರೆಸ್‌ನ ಇಂಡಿ ಮೈತ್ರಿಯು 3-6 ಸ್ಥಾನಗಳನ್ನು ಪಡೆಯುತ್ತದೆ ಎಂದು ಸೂಚಿಸಿದೆ. ಇದೇ ವೇಳೆ, ಬಿಎಸ್‌ಪಿ ಮತ್ತಿತರರ ಖಾತೆಗಳೂ ತೆರೆಯುವುದಿಲ್ಲ ಎಂದು ಅಂದಾಜಿಸಲಾಗಿದೆ.
ಮೋದಿ ಮಗದೊಮ್ಮೆ:ಪ್ರಧಾನಿ ನರೇಂದ್ರ ಮೋದಿ ಕೂಡ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಮತ್ತು ದೆಹಲಿಯ ಸಿಂಹಾಸನದ ದೃಷ್ಟಿಯಿಂದ ಯುಪಿಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಯುಪಿ ಗೆದ್ದವರು ಅಧಿಕಾರಕ್ಕೆ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತದೆ.