ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳು ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಈಗಾಗಲೇ ಪ್ರಚಾರ ಕಾರ್ಯತಂತ್ರಗಳನ್ನು ಮಾಡುತ್ತಿವೆ. ಈ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ದೇಶದಲ್ಲಿ 96 ಕೋಟಿಗೂ ಹೆಚ್ಚು ಮತದಾರರಿದ್ದಾರೆ ಎಂದು ಚುನಾವಣಾ ಆಯೋಗದ (ಇಸಿ) ಅಂಕಿಅಂಶಗಳು ತೋರಿಸುತ್ತಿವೆ. ಅವರಲ್ಲಿ 47 ಕೋಟಿ ಮಹಿಳೆಯರು ಇದ್ದಾರೆ ಎಂದು ಚುನಾವಣೆ ಆಯೋಗ ಹೇಳಿದೆ. ದೇಶಾದ್ಯಂತ 12 ಲಕ್ಷಕ್ಕೂ ಅಧಿಕ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
1.5 ಕೋಟಿ ಸಿಬ್ಬಂದಿ ನೇಮಕ:ಚುನಾವಣಾ ಆಯೋಗದ ಪ್ರಕಾರ, 18 ರಿಂದ 19 ವರ್ಷದೊಳಗಿನ ಸುಮಾರು 1.73 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಸಂಸತ್ ಚುನಾವಣೆಗೆ 1.5 ಕೋಟಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ಹೇಳಿದೆ. ಕಳೆದ ವರ್ಷ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಕಳುಹಿಸಿದ್ದ ಪತ್ರದ ಪ್ರಕಾರ 1951ರಲ್ಲಿ ದೇಶದಲ್ಲಿ 17.32 ಕೋಟಿ ನೋಂದಾಯಿತ ಮತದಾರರಿದ್ದರು. 2019ರ ಚುನಾವಣೆ ವೇಳೆಗೆ ಈ ಸಂಖ್ಯೆ 91.20 ಕೋಟಿಗೆ ಏರಿಕೆಯಾಗಿದೆ. ಮೊದಲ ಲೋಕಸಭೆ ಚುನಾವಣೆಯಲ್ಲಿ ಶೇ.45ರಷ್ಟು ಮತದಾನ ದಾಖಲಾಗಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.67ರಷ್ಟು ಮತದಾನವಾಗಿತ್ತು.