ನವದೆಹಲಿ:2024ರ ಲೋಕಸಭೆ ಚುನಾವಣೆಗೆ ಏಳು ಹಂತಗಳ ಮತದಾನ ಇಂದು ಮುಕ್ತಾಯವಾಗಿದೆ. ಇದರ ನಡುವೆ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ಸಭೆ ನಡೆಸಿದೆ. ಸಭೆ ಬಳಿಕ ಖರ್ಗೆ ಮಾತನಾಡಿ, ನಾವು ಒಗ್ಗಟ್ಟಾಗಿದ್ದೇವೆ, ಒಗ್ಗಟ್ಟಿನಿಂದ ಇರುತ್ತೇವೆ. ನಮ್ಮನ್ನು ವಿಭಜಿಸಲು ಪ್ರಯತ್ನಿಸಬೇಡಿ. ನಮ್ಮ 'ಇಂಡಿಯಾ' ಮೈತ್ರಿಕೂಟ ಕನಿಷ್ಠ 295 ಸ್ಥಾನಗಳನ್ನು ಗೆಲ್ಲುತ್ತದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಕೊನೆಯ ಹಂತದ ಮತದಾನದೊಂದಿಗೆ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಪ್ರತಿಪಕ್ಷಗಳದ 'ಇಂಡಿಯಾ' ಮೈತ್ರಿಕೂಟದ ಕಾಂಗ್ರೆಸ್, ಸಮಾಜವಾದಿ ಪಕ್ಷ, ಸಿಪಿಐ-ಎಂ, ಸಿಪಿಐ, ಡಿಎಂಕೆ, ಜೆಎಂಎಂ, ಎಎಪಿ, ಆರ್‌ಜೆಡಿ, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಶರದ್ ಪವಾರ್) ಪಕ್ಷದ ನಾಯಕರು ಖರ್ಗೆ ನಿವಾಸದಲ್ಲಿ ಸಭೆ ಸೇರಿದರು.
ಈ ಸಭೆಯಲ್ಲಿ ಖರ್ಗೆ ಅವರೊಂದಿಗೆ ಕಾಂಗ್ರೆಸ್ ಸಂಸದೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಎನ್‌ಸಿಪಿ ನಾಯಕ ಜಿತೇಂದ್ರ ಅವದ್, ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಆಪ್ ಮುಖಂಡರಾದ ರಾಘವ್ ಚಡ್ಡಾ, ಸಂಜಯ್ ಸಿಂಗ್ ಭಾಗವಹಿಸಿದ್ದರು.