ನವದೆಹಲಿ: 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಪ್ರಣಾಳಿಕೆ ತಯಾರಿಸಲು 27 ಸದಸ್ಯರ ಸಮಿತಿಯನ್ನು ಶನಿವಾರ ರಚಿಸಿದೆ. ರಕ್ಷಣಾ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಿರ್ಮಲಾ ಸೀತಾರಾಮನ್, ವಸುಂಧರಾ ರಾಜೆ ಮತ್ತು ಸ್ಮೃತಿ ಇರಾನಿ ಅವರಂತಹ ಪ್ರಮುಖ ನಾಯಕರು ಇದ್ದಾರೆ. ಕರ್ನಾಟಕದಿಂದ ರಾಜೀವ್ ಚಂದ್ರಶೇಖರ್ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆದ ರಾಜನಾಥ್ ಸಿಂಗ್ 2019ರ ಚುನಾವಣೆಯಲ್ಲೂ ಬಿಜೆಪಿಯ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ಸಮಿತಿನಲ್ಲಿಯೂ ಹಲವು ಸದಸ್ಯರು ಪುನರಾವರ್ತನೆಯಾಗಿದ್ದಾರೆ. ರಾಜನಾಥ್ ಸಿಂಗ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರೆ, ನಿರ್ಮಲಾ ಸೀತಾರಾಮನ್ ಅವರನ್ನು ಸಂಯೋಜಕರಾಗಿ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಅಶ್ವಿನಿ ವೈಷ್ಣವ್, ಭೂಪೇಂದರ್ ಯಾದವ್, ಕಿರಣ್ ರಿಜಿಜು, ಅರ್ಜುನ್ ಮುಂಡಾ, ಅರ್ಜುನ್ ರಾಮ್ ಮೇಘವಾಲ್, ಸ್ಮೃತಿ ಇರಾನಿ ಮತ್ತು ರಾಜೀವ್ ಚಂದ್ರಶೇಖರ್ ಸದಸ್ಯರಾಗಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಛತ್ತೀಸ್‌ಗಢದ ಸಿಎಂ ವಿಷ್ಣು ದೇವ್ ಸಾಯಿ ಮತ್ತು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಕೂಡ ಸಮಿತಿಯಲ್ಲಿದ್ದಾರೆ. ಆದಾಗ್ಯೂ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸೇರಿದಂತೆ ಇತರ ಮುಖ್ಯಮಂತ್ರಿಗಳು ಸಮಿತಿಯಲ್ಲಿ ಇಲ್ಲ. ಈ ಸಮಿತಿಯಲ್ಲಿಲ್ಲದ ಪಕ್ಷದ ಹಿರಿಯ ನಾಯಕರನ್ನು ಚುನಾವಣೆಗೆ ಸಂಬಂಧಿಸಿದ ಇತರ ಸಂಘಟನಾ ಕಸರತ್ತಿನ ಭಾಗವಾಗಿ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.