ರಾಂಚಿ/ಧನಬಾದ್: ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎಲ್ಜೆಪಿ (ಲೋಕ ಜನಶಕ್ತಿ ಪಾರ್ಟಿ- ರಾಮ್ ವಿಲಾಸ್) ಪಕ್ಷ ಸ್ಪರ್ಧಿಸಲಿದ್ದು, ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಬಹುದು ಅಥವಾ ಏಕಾಂಗಿಯಾಗಿ ಸ್ಪರ್ಧಿಸಬಹುದು ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ರವಿವಾರ ಹೇಳಿದ್ದಾರೆ.
ಬಿಜೆಪಿಯು ಜಾರ್ಖಂಡ್ನಲ್ಲಿ ಎಜೆಎಸ್ಯು ಪಾರ್ಟಿ ಮತ್ತು ಜೆಡಿಯು ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಜಾರ್ಖಂಡ್ನ ಬಿಜೆಪಿ ಚುನಾವಣಾ ಸಹ ಉಸ್ತುವಾರಿಯಾಗಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ ಒಂದು ದಿನದ ನಂತರ ಪಾಸ್ವಾನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
"ಎಲ್ಜೆಪಿಯ ರಾಜ್ಯ ಘಟಕವು ಮೈತ್ರಿಯೊಂದಿಗೆ ಅಥವಾ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸೇರಿದಂತೆ ಎಲ್ಲಾ ಆಯ್ಕೆಗಳ ಬಗ್ಗೆ ಚರ್ಚಿಸುತ್ತಿದೆ" ಎಂದು ಪಾಸ್ವಾನ್ ಧನಬಾದ್ಗೆ ತೆರಳುವಾಗ ರಾಂಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಬಿಜೆಪಿ ನೇತೃತ್ವದ ಎನ್ಡಿಎ ಭಾಗವಾಗಿರುವ ಎಲ್ಜೆಪಿ (ರಾಮ್ ವಿಲಾಸ್) ಜಾರ್ಖಂಡ್ನಲ್ಲಿ ಬಲವಾದ ನೆಲೆಯನ್ನು ಹೊಂದಿದೆ. ನಾನು ಹುಟ್ಟಿದಾಗ ಜಾರ್ಖಂಡ್ ಬಿಹಾರದ ಭಾಗವಾಗಿತ್ತು. ಇದು ನನ್ನ ತಂದೆಯ ಕೆಲಸದ ಸ್ಥಳವಾಗಿತ್ತು. ಪಕ್ಷವು ರಾಜ್ಯದಲ್ಲಿ ಬಲವಾದ ಸಾಮೂಹಿಕ ನೆಲೆಯನ್ನು ಅಭಿವೃದ್ಧಿಪಡಿಸಿದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ" ಎಂದು ಅವರು ಹೇಳಿದರು.