ಶಿಮ್ಲಾ: ಸ್ವಾತಂತ್ರ್ಯ ದಿನಾಚರಣೆಯಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರೆ, ಬಾಂಬ್ ದಾಳಿ ನಡೆಸುವುದಾಗಿ ಖಲಿಸ್ತಾನಿ ಗುಂಪು ಬೆದರಿಕೆಯೊಡ್ಡಿದೆ.
ಇದೇ ರೀತಿಯ ಸಂದೇಶವನ್ನು ಗಗ್ರೆಟ್ ಶಾಸಕ ರಾಕೇಶ್ ಕಲಿಯಾ ಕೂಡ ಮಂಗಳವಾರ ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಪಡೆದಿದ್ದಾರೆ.
ಬೆದರಿಕೆ ಒಡ್ಡಿರುವ ವ್ಯಕ್ತಿ ತನ್ನನ್ನು ಸಿಖ್ ಫಾರ್ ಜಸ್ಟೀಸ್ ಸಂಘಟನೆ ಮುಖ್ಯಸ್ಥ ಎಂದು ಪರಿಚಯಿಸಿಕೊಂಡಿದ್ದಾನೆ. ಆಗಸ್ಟ್ 15ರಂದು ಡೆಹ್ರಾದ ಶಹೀದ್ ಭುವನೇಶ್ ಡೋಗ್ರಾ ಮೈದಾನದಲ್ಲಿ ಸಿಎಂ ಒಂದು ವೇಳೆ ಧ್ವಜಾರೋಹಣ ಮಾಡಿದರೆ, ತಾವು ಅಲ್ಲಿಯೇ ಇದ್ದು ಬಾಂಬ್ ದಾಳಿ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾನೆ. ಭಾರತೀಯರು ಮತ್ತು ನಿಮ್ಮ ದೇಶದ ವಿರುದ್ಧ ಇದು ನಮ್ಮ ಯುದ್ಧದ ಆರಂಭ ಎಂದು ಸಂದೇಶದಲ್ಲಿ ಕಳುಹಿಸಿದ್ದಾನೆ.
ಈ ಪ್ರಕರಣ ಸಂಬಂಧ ಶಾಸಕ ರಾಕೇಶ್ ಕಾಲಿಯಾ ಅಮ್ಬ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಕುರಿತು ಮಾಹಿತಿ ನೀಡಿದ ಅಮ್ಬ್ ಪೊಲೀಸ್ ಠಾಣೆಯ ಅಧಿಕಾರಿ ಗೌರವ್ ಭರಧ್ವಾಜ್ ಮಾತನಾಡಿ, ಅಪರಿಚಿತ ವ್ಯಕ್ತಿ ಈ ರೀತಿ ಬೆದರಿಕೆ ಹಾಕಿದ್ದು, ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಕೂಡ ಶುರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಖಾಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನಿಂದ ಇದೇ ರೀತಿಯ ಬೆದರಿಕೆ ಸಂದೇಶ ಬಂದಿತ್ತು. ಶಿಮ್ಲಾದ ಐಎಸ್‌ಬಿಟಿ ರಸ್ತೆ ಮತ್ತು ಧರ್ಮಶಾಲಾ ತಪೋವನ ಅಸೆಂಬ್ಲಿಯಲ್ಲಿರುವ ಸರ್ಕಾರಿ ಕಚೇರಿಯ ಹೊರಗೆ ಖಲಿಸ್ತಾನಿ ಪೋಸ್ಟರ್‌ಗಳು ಕಂಡುಬಂದಿದ್ದವು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಡೆಹ್ರಾ ಕ್ಷೇತ್ರವೂ ಸಿಎಂ ಪತ್ನಿ ಕಮಲೇಶ್ ಠಾಕೂರ್ ಕ್ಷೇತ್ರವಾಗಿದ್ದು, ಉಪ ಚುನಾವಣೆಯಲ್ಲಿ ಬಿಜೆಪಿಯ ಹೊಶ್ಯರ್ ಸಿಂಗ್ ವಿರುದ್ಧ ಇವರು ಜಯ ಗಳಿಸಿದ್ದರು. ಚುನಾವಣಾ ಪ್ರಚಾರದ ವೇಳೆ ಅವರು ಡೆಹ್ರಾದಲ್ಲಿ ರಾಜ್ಯಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಈ ಬಾರಿ ಅಲ್ಲಿ ಧ್ವಜಾರೋಹಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:2036ಕ್ಕೆ 152 ಕೋಟಿ ತಲುಪಲಿರುವ ಭಾರತದ ಜನಸಂಖ್ಯೆ; ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ, ಯುವಕರ ಸಂಖ್ಯೆ ಇಳಿಕೆ!