ನವದೆಹಲಿ:ಮುಂದಿನ ವರ್ಷ ನಡೆಯಲಿರುವದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರ 'ರೆವಡಿ ಪರ್ ಚರ್ಚಾ'(ಉಚಿತ ಯೋಜನೆಗಳ ಕುರಿತು ಚರ್ಚೆ) ಅಭಿಯಾನಕ್ಕೆ ಚಾಲನೆ ನೀಡಿದರು. ಆಪ್ ಸರ್ಕಾರ ನೀಡಿದ ಉಚಿತ ಯೋಜನೆಗಳ ಕುರಿತ ಚರ್ಚೆಯಲ್ಲಿ ದೆಹಲಿಯ ಜನರನ್ನು ತೊಡಗಿಸಿಕೊಳ್ಳುವ ಗುರಿಯನ್ನು ಈ ಅಭಿಯಾನ ಹೊಂದಿದೆ.
ಅಭಿಯಾನದ ಭಾಗವಾಗಿ 65 ಸಾವಿರಕ್ಕೂ ಹೆಚ್ಚು ಆಪ್ ಕಾರ್ಯಕರ್ತರು ನಗರದಾದ್ಯಂತ ಸಭೆಗಳನ್ನು ಆಯೋಜಿಸಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಸಾರ್ವಜನಿಕರ ಹಣದಿಂದ ನೀಡುವ ಸರ್ಕಾರಿ ಸೇವೆಗಳ ಪ್ರಯೋಜನ ಪಡೆಯುವ ಹಕ್ಕು ನಾಗರಿಕರಿಗೆ ಇದೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷದ ಜತೆ ಜನ:ಆಮ್ ಆದ್ಮಿ ಪಕ್ಷದ ದೆಹಲಿ ರಾಜ್ಯ ಸಂಚಾಲಕ ಗೋಪಾಲ್ ರೈ ಮಾತನಾಡಿ, "ಜನರು ಆಮ್ ಆದ್ಮಿ ಪಕ್ಷದ ಜೊತೆಗಿದ್ದಾರೆ. ದೆಹಲಿಯ ಜನತೆ ಕಳೆದ ಬಾರಿಯಂತೆ ಭಾರಿ ಬಹುಮತ ನೀಡುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ. ಪಕ್ಷದ ಟಿಕೆಟ್ ಪಡೆದವರೆಲ್ಲರೂ ತಳಮಟ್ಟದ ನಾಯಕರು. ಕಳೆದ ಎರಡು ತಿಂಗಳಿನಿಂದ ಆಮ್ ಆದ್ಮಿ ಪಕ್ಷವು ಸಾರ್ವಜನಿಕರ ಜೊತೆ ಸಕ್ರಿಯವಾಗಿದೆ" ಎಂದರು.
"ನಾವು ಮೊದಲ ಹಂತದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತು ಶಾಸಕರು ಮಾಡಿದ ಕೆಲಸವನ್ನು 'ಆಪ್ಕೆ ಎಂಎಲ್ಎ ಆಪ್ಕೆ ದ್ವಾರ್' ಕಾರ್ಯಕ್ರಮದ ಮೂಲಕ ದೆಹಲಿಯ ಜನರಿಗೆ ತಿಳಿಸಲಾಯಿತು. ಎರಡನೇ ಹಂತದಲ್ಲಿ, ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಪಕ್ಷದ ವರಿಷ್ಠರು ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಿದ್ದೆವು. ಮೂರನೇ ಹಂತದಲ್ಲಿ, ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಎಲ್ಲ 70 ವಿಧಾನಸಭಾ ಕ್ಷೇತ್ರಗಳಲ್ಲಿನ ಜಿಲ್ಲೆ, ತಾಲೂಕು ಮತ್ತು ವಾರ್ಡ್ ಮಟ್ಟದ ಎಲ್ಲ ಅಧಿಕಾರಿಗಳೊಂದಿಗೆ ನೇರವಾಗಿ ಸಭೆ ನಡೆಸಿ ಮುಂದಿನ ಕ್ರಿಯಾ ಯೋಜನೆಯನ್ನು ರೂಪಿಸಿದ್ದರು" ಎಂದು ಹೇಳಿದರು.