ನವದೆಹಲಿ:ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಿದ ಕಾರಣ, ಏಮ್ಸ್ ವೈದ್ಯರ ಸಲಹೆಯಂತೆ ಇನ್ಸುಲಿನ್ ನೀಡಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕೇಜ್ರಿವಾಲ್ ಅವರ ಸಕ್ಕರೆ ಕಾಯಿಲೆಗೆ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆಪ್ ಆರೋಪಿಸಿದ್ದು, ಇದಕ್ಕೆ ಜೈಲು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಏಮ್ಸ್ ವೈದ್ಯರ ಸಲಹೆಯ ಮೇರೆಗೆ ಸೋಮವಾರ ಸಂಜೆ ಕೇಜ್ರಿವಾಲ್ ಅವರಿಗೆ ಕಡಿಮೆ ಪ್ರಮಾಣದ ಇನ್ಸುಲಿನ್ನ ಎರಡು ಡೋಸ್ ನೀಡಲಾಗಿದೆ. ಅವರು ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
ರಾತ್ರಿ 7 ಗಂಟೆ ಸುಮಾರಿಗೆ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 217 ರಷ್ಟಿತ್ತು. ವಿಡಿಯೋ ಕಾನ್ಫ್ರೆನ್ಸ್ ಮೂಲಕ ಏಮ್ಸ್ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಕೋರಲಾಯಿತು. ಏಮ್ಸ್ ತಜ್ಞರು, ತಿಹಾರ್ ವೈದ್ಯರಿಗೆ ಸಕ್ಕರೆ ಮಟ್ಟವು ಒಂದು ನಿರ್ದಿಷ್ಟ ಮಟ್ಟವನ್ನು ದಾಟಿದರೆ ಅವರಿಗೆ ಇನ್ಸುಲಿನ್ ನೀಡಬಹುದು ಎಂದು ಸಲಹೆ ನೀಡಿದ್ದರು. ಅದರಂತೆ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು 320 ದಾಟಿದೆ ಎಂದು ಆಪ್ ಆರೋಪಿಸಿದೆ. ಕೆಲ ದಿನಗಳಿಂದ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಿದ್ದರೂ ಜೈಲಿನಲ್ಲಿ ಅವರಿಗೆ ಇನ್ಸುಲಿನ್ ನೀಡುತ್ತಿರುವುದು ಇದೇ ಮೊದಲು ಎಂದು ಹೇಳಿದೆ.
ಜೈಲಲ್ಲಿ ಕೊಲೆಗೆ ಯತ್ನ ಆರೋಪ:ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿನಲ್ಲೇ ಹತ್ಯೆ ಮಾಡುವ ಸಂಚು ನಡೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷ (ಆಪ್) ಈಚೆಗೆ ಗಂಭೀರ ಆರೋಪ ಮಾಡಿತ್ತು. ಮಧುಮೇಹದಿಂದ ಬಳಲುತ್ತಿರುವ ಅವರಿಗೆ ಇನ್ಸುಲಿನ್ ನೀಡಲಾಗುತ್ತಿಲ್ಲ. ಇದು ಅವರನ್ನು ಕೊಲ್ಲಲು ಮಾಡುತ್ತಿರುವ ತಂತ್ರ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ದೂರಿದ್ದರು.
ಅರವಿಂದ್ ಕೇಜ್ರಿವಾಲ್ ಅವರು ಕಳೆದ 22 ವರ್ಷಗಳಿಂದ ಮಧುಮೇಹಕ್ಕೆ ತುತ್ತಾಗಿದ್ದಾರೆ. 12 ವರ್ಷಗಳಿಂದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಅವರ ಆರೋಗ್ಯ ಉತ್ತಮವಾಗಿದೆ. ಇನ್ಸುಲಿನ್ ಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ತಿಹಾರ್ ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರ ಹಿಂದೆ ಏನೋ ರಹಸ್ಯ ಅಡಗಿದೆ ಎಂದು ಅವರು ಹೇಳಿದ್ದರು.
ಜೈಲಧಿಕಾರಿಗಳು ಸ್ಪಷ್ಟನೆ ಏನು?:ಕೇಜ್ರಿವಾಲ್ ಅವರು ಬಂಧನಕ್ಕೂ ಒಂದು ತಿಂಗಳು ಮೊದಲು ಮಧುಮೇಹಕ್ಕೆ ಇನ್ಸುಲಿನ್ ಪಡೆಯುವುದನ್ನು ನಿಲ್ಲಿಸಿದ್ದಾರೆ. ಈಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಹೀಗಾಗಿ ಅವರಿಗೆ ಚುಚ್ಚುಮದ್ದು ಬೇಕಾಗಿಲ್ಲ ಎಂದು ದೆಹಲಿ ಗವರ್ನರ್ ಜನರಲ್ಗೆ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು(ಇಡಿ) ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಏಪ್ರಿಲ್ 23 ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ:ಜೈಲಿನಲ್ಲಿ ಕೇಜ್ರಿವಾಲ್ ಹತ್ಯೆ ಸಂಚು- ಆಪ್ ಆರೋಪ; ದೆಹಲಿ ಸಿಎಂ ಆರೋಗ್ಯ ಚೆನ್ನಾಗಿದೆ-ಜೈಲಧಿಕಾರಿಗಳು - CM Aravind Kejriwal