ವಯನಾಡು (ಕೇರಳ):ವಯನಾಡಿನ ವೈತಿರಿ ಎಂಬಲ್ಲಿ ಕರ್ನಾಟಕದ ಪ್ರವಾಸಿ ಬಸ್ವೊಂದು ಅಪಘಾತಕ್ಕೀಡಾಗಿದ್ದು, ಶಾಲಾ ಮಕ್ಕಳು ಸೇರಿದಂತೆ 22 ಮಂದಿ ಗಾಯಗೊಂಡಿದ್ದಾರೆ. ಬುಧವಾರ ಬೆಳಗಿನ ಜಾವ 3:30ರ ಸುಮಾರಿಗೆ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಗಾಯಾಳುಗಳನ್ನು ವೈತಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರಿಗೂ ಕೂಡ ಗಂಭೀರ ಗಾಯಗಳಾಗಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಬಸ್ ಕೊಡಗಿನ ಕುಶಾಲನಗರದಿಂದ ಕೇರಳ ಪ್ರವಾಸಕ್ಕೆ ತೆರಳಿತ್ತು. ಗುರುವಾಯೂರಿಗೆ ಪ್ರವಾಸಕ್ಕೆಂದು ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದು, ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಾಯಗೊಂಡ ಸೋನಿಯಾ (15), ಹಂದಾನ (14), ಬಾಂಧವ್ಯ (15), ಪ್ರಿಯಾಂಕಾ (15), ನಿಕಿತಾ (15), ನಂದನಾ (14), ಮೋನಿಕಾ (15), ಧನುಷ್ (15), ನೂತನ್‌ಕುಮಾರ್ (15), ರೀತಾ (15), ಕೀರ್ತಿ (15), ಯಶವಿನಿ (15), ವಿನೋದ್ (15), ಅನುಷಾ (15), ಪುಷ್ಪಿತಾ (14), ದಯಾನಂದ್ (34), ಮಹದೇವ ಪ್ರಸಾದ್ (37), ಸುನೀತಾ (30), ಶಂಕರ್ (50), ರಾಜನ್ (72), ಮತ್ತು ಬಿನೀಶ್ (44) ಎಂಬವರನ್ನು ವೈತಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿದ್ದ ರಾಜನ್ ಮತ್ತು ಬಿನೀಷ್ ಅವರನ್ನು ಮೆಪ್ಪಾಡಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ಸರ್ಕಾರಿ ಬಸ್ನಲ್ಲಿ ಏಕಾಏಕಿ ಬೆಂಕಿ: ಡ್ರೈವರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು